ಬೆಂಗಳೂರು: ರಾಜ್ಯ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಇಬ್ಬರು ಐಪಿಎಸ್ ಹಾಗೂ 23 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಈ ಸಂಬಂಧ ಅಧಿಸೂಚನೆ ಪ್ರಕಟಿಸಿದ್ದು, ಹಲವು ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ಮೈಸೂರು ಪೊಲೀಸ್ ಆಯುಕ್ತರ ವರ್ಗಾವಣೆ:
ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿದ್ದ 2012ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಎನ್. ವಿಷ್ಣುವರ್ಧನ ಅವರನ್ನು ನೇಮಕ ಮಾಡಲಾಗಿದೆ. ಈ ಹುದ್ದೆಯನ್ನು ಸಿಐಡಿ ಡಿಐಜಿಪಿ ಕೇಡರ್ ಹುದ್ದೆಗೆ ಸಮನಾಗಿ ಸರ್ಕಾರ ಘೋಷಿಸಿದೆ. ಸೀಮಾ ಲಾಟ್ಕರ್ ಅವರಿಗೆ ಸದ್ಯಕ್ಕೆ ಯಾವುದೇ ಹೊಸ ಸ್ಥಳ ನಿಯುಕ್ತಿ ಮಾಡಿಲ್ಲ.
ಪ್ರಮುಖ ಕೆಎಎಸ್ ಅಧಿಕಾರಿಗಳ ವರ್ಗಾವಣೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ಇಸ್ಲಾವುದ್ದೀನ್ ಗದ್ಯಾಳ್ ಅವರನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರನ್ನಾಗಿ ನೇಮಿಸಲಾಗಿದೆ. ಅವರಿಂದ ತೆರವಾದ ಕೆಇಎ ಆಡಳಿತಾಧಿಕಾರಿ ಹುದ್ದೆಗೆ ಹಾಸನದ ಅಪರ ಜಿಲ್ಲಾಧಿಕಾರಿಯಾಗಿದ್ದ ಕೃಷ್ಣಮೂರ್ತಿ ಎಚ್.ಕೆ. ಅವರನ್ನು ನಿಯೋಜಿಸಲಾಗಿದೆ.
ಕಂದಾಯ ಆಯುಕ್ತಾಲಯದ ಅಪರ ಕಂದಾಯ ಆಯುಕ್ತರಾಗಿದ್ದ ನೂರ್ ಜಹರಾ ಖಾನಂ ಅವರನ್ನು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಈವರೆಗೆ ಈ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ಸಿ. ಸತ್ಯಭಾಮ ಅವರಿಗೆ ಸದ್ಯಕ್ಕೆ ಯಾವುದೇ ಸ್ಥಳ ನಿಯುಕ್ತಿ ನೀಡದೆ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ಕಮಲಾಬಾಯಿ ಬಿ. ಅವರನ್ನು ಕರ್ನಾಟಕ ಮುನಿಸಿಪಲ್ ಡೇಟಾ ಸೊಸೈಟಿಯ ಜಂಟಿ ನಿರ್ದೇಶಕರನ್ನಾಗಿ, ಮಾರುತಿ ಬ್ಯಾಕೋಡ್ ಅವರನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಿಸಲಾಗಿದೆ. ಪಾರ್ವತಿ ಅವರನ್ನು ದೇವದುರ್ಗದ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹಾಗೂ ಜಿ.ಎಚ್. ಸತ್ಯನಾರಾಯಣ ಅವರನ್ನು ಸಾಗರ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಜಂಬಗಿ ರೇಣುಕಾಪ್ರಸಾದ್ ದಿಲೀಪ್ ಅವರಿಗೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ರಾಜ್ಯ ಪ್ರತಿನಿಧಿ-1 ಹುದ್ದೆ ನೀಡಲಾಗಿದೆ. ನಹಿದಾ ಜಮ್ ಜಮ್ ಅವರನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-07ರ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹಾಗೂ ಮಂಜುನಾಥ್ ಕೆ. ಅವರನ್ನು ತುಮಕೂರು ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ನೇಮಿಸಲಾಗಿದೆ. ನಯೀಂ ಉನ್ನೀಸಾ ಆರ್. ಅವರಿಗೆ ಪ್ರಸ್ತುತ ಹುದ್ದೆಯ ಜೊತೆಗೆ ರಾಜ್ಯ ಚುನಾವಣಾ ಆಯೋಗದ ತಹಶೀಲ್ದಾರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
12 ಕೆಎಎಸ್ ಅಧಿಕಾರಿಗಳ ಸ್ಥಳ ನಿಯುಕ್ತಿ ಮಾರ್ಪಾಡು:
ಈ ಹಿಂದೆ ಹೊರಡಿಸಿದ್ದ ವರ್ಗಾವಣೆ ಆದೇಶವನ್ನು ಭಾಗಶಃ ಮಾರ್ಪಡಿಸಿ 12 ಕೆಎಎಸ್ ಅಧಿಕಾರಿಗಳ ಸ್ಥಳ ನಿಯುಕ್ತಿಯಲ್ಲೂ ಬದಲಾವಣೆ ಮಾಡಲಾಗಿದೆ. ಪ್ರಕಾಶ್ ಎಂ. ನಾಶಿ ಅವರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಆಯುಕ್ತರು-5 ಹುದ್ದೆಗೆ, ಸಂತೋಷ್ ರಾಣಿ ಅವರನ್ನು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಸಿದ್ದರಾಯ ಜಟ್ಟೆಪ್ಪ ಭೋಸಗಿ ಅವರನ್ನು ಬೀಳಗಿಯ ಯುಕೆಪಿ ಪುನರ್ವಸತಿ ಅಧಿಕಾರಿಯಾಗಿ, ಯಲ್ಲಪ್ಪ ಗೋಣೆಣ್ಣನವರ ಅವರನ್ನು ಬೆಳಗಾವಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಯಾಗಿ ಮುಂದುವರಿಸಲಾಗಿದೆ. ನರಸಿಂಹಮೂರ್ತಿ ಟಿ.ಎನ್. ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನಾಗಿ ಹಾಗೂ ಅಣ್ಣಾರಾವ್ ಪಾಟೀಲ್ ಅವರನ್ನು ಕಲಬುರಗಿಯ ಜೆಸ್ಕಾಂ ಪ್ರಧಾನ ವ್ಯವಸ್ಥಾಪಕರನ್ನಾಗಿ ನೇಮಿಸಲಾಗಿದೆ.
ಸುರೇಶ್ ಅವರನ್ನು ಕಲಬುರಗಿಯ ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ, ಅಂಜುಂ ತಬಸ್ಸುಮ್ ಲಷ್ಕರಿ ಅವರನ್ನು ಕಲಬುರಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಮೋಹನ್ ಭಸ್ಮೆ ಅವರನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ, ಮಂಜುನಾಥ್ ಮುನ್ನೋಳ್ಳಿ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ವಲಯ ಆಯುಕ್ತರು (ದಕ್ಷಿಣ) ಹುದ್ದೆಗೆ ನೇಮಿಸಲಾಗಿದೆ. ನಾಗಮ್ಮ ಅವರಿಗೆ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಜವಾಬ್ದಾರಿ ನೀಡಲಾಗಿದೆ. ಡಾ. ನಯನ ಎಂ. ಅವರನ್ನು ಕೋಲಾರ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಒಟ್ಟಾರೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಆಡಳಿತ ವಿಭಾಗಗಳಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ಬದಲಾವಣೆ ಮೂಲಕ ರಾಜ್ಯ ಸರ್ಕಾರ ಆಡಳಿತಾತ್ಮಕ ಪುನರ್ವ್ಯವಸ್ಥೆ ಮಾಡಿದೆ.









