ಮಕ್ಕಳು ಮುದ್ದಾದ ನಿಷ್ಕಲ್ಮಶ ಮನಸ್ಸಿನವರು. ದೊಡ್ಡವರ ಅನುಕರಣೆ ಮಾಡಿ, ಅವರಂತೆ ಅನುಕರಿಸುತ್ತಾರೆ. ಮಕ್ಕಳು ಸ್ವರ್ಗದಿಂದ ಬಂದ ಹೂವುಗಳು. ಮಕ್ಕಳು ನಮ್ಮ ಅತ್ಯಮೂಲ್ಯ ಸಂಪನ್ಮೂಲಗಳು. ಮಕ್ಕಳು ನಮ್ಮ ಉಜ್ವಲ ನಾಳೆಯ ಭರವಸೆಗಳನ್ನು ಮತ್ತು ನಮ್ಮ ಸಂತೋಷದ ಭವಿಷ್ಯದ ಕನಸುಗಳನ್ನು ಹೊತ್ತಿರುವ ಕುಸುಮಗಳು.
ಆ ಮಕ್ಕಳು ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು, ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಸವಿನೆನಪಿಗಾಗಿ ಈ ದಿನದಂದು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನ. 14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಇದು ಮಕ್ಕಳಿಗೆ ಖುಷಿಯಿಂದ ಕುಣಿಯುವ ದಿನ, ಬಾಲ್ಯದ ಸೊಗಸು, ಬೆಡಗು, ಬೆರಗು ಮತ್ತು ನೆಹರು ಅವರ ಮಕ್ಕಳ ಮೇಲಿನ ಅಪಾರ ಅಕ್ಕರೆ ಪ್ರೀತಿಯನ್ನು ಸಂಭ್ರಮದಿಂದ ನೆನೆವ ದಿನ. ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಜಗತ್ತನ್ನು ಬದಲಾಯಿಸಬಹುದು ಎಂದು ನಾವು ನೆನಪಿಟ್ಟುಕೊಳ್ಳೋಣ. ಅದರಂತೆ ನಮ್ಮ ಮಕ್ಕಳಿಗೆ ಕಣ್ಣು ತೆರೆದು ಕನಸು ಕಾಣಲು ಕಲಿಸಬೇಕು.
ನೆಹರು ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಏಕೆ ಅನುಮತಿ ನೀಡಿದರು ಎನ್ನುವ ಕತೆಯೇ ರೋಚಕ. 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್‌ನ ಮಕ್ಕಳ ಕಲ್ಯಾಣಕ್ಕಾಗಿ ವಿ.ಎನ್. ಕುಲಕರ್ಣಿ ಎನ್ನುವವರು ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜಬೆತ್-2 ಅವರ ಜನ್ಮದಿನವನ್ನು, ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿ-ಗತಿಯ ಕಡೆಗೆ ವಾಲಿತು.
ಇಂತಹಒಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಗಿದ್ದ ಚಾಚಾ ನೆಹರು ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು. ಮಕ್ಕಳೊಂದಿಗೆ ಮಗುವಾಗುತ್ತಿದ್ದ ಮತ್ತು ಮಕ್ಕಳ ಬಗ್ಗೆ ಅಪಾರ ಒಲವಿದ್ದ ನೆಹರು ಅವರು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು. ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು.
ರಾಷ್ಟ್ರವನ್ನು ಕಟ್ಟಲಾಗುತ್ತಿರುವ ಒಂದು ಮನೆಯೆಂದು ಪರಿಗಣಿಸುವುದಾದರೆ ಮಕ್ಕಳು ಆ ಮನೆ ನಿರ್ಮಾಣದ ಇಟ್ಟಿಗೆಗಳಂತೆ. ನಾವೆಷ್ಟು ಉತ್ತಮವಾದ ಇಟ್ಟಿಗೆಯನ್ನು ಮನೆಯ ನಿರ್ಮಾಣಕ್ಕಾಗಿ ಸಜ್ಜುಗೊಳಿಸುತ್ತೇವೆಯೋ ಅಷ್ಟು ಸುಂದರವಾದ ಮನೆ ನಿರ್ಮಾಣವಾಗುತ್ತದೆ. ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಪ್ರದಾಯ ಎಲ್ಲವೂ ಉಳಿದು ಬೆಳೆದು ಸಾಗಬೇಕು ಎಂದಾದರೆ ಪ್ರತಿಯೊಬ್ಬ ಹಿರಿಯರೊಳಗಿರುವ ಮಗುವೂ ಜೀವಂತವಾಗಿರಬೇಕು ಮತ್ತು ಪ್ರತಿ ಮಗುವಿಗೂ ಅತ್ಯುತ್ತಮ ಪೋಷಣೆಯ ಅಡಿಪಾಯ ದೊರೆಯಬೇಕು.
ಹಿಂದಿನ ಕಾಲದಲ್ಲಿ ಗುರುಗಳು ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಕಿವಿ ಹಿಂಡಿ, ಅಗತ್ಯ ಬಿದ್ದಾಗ ದಂಡ ದಶಗುಣಂ ಎಂದು ಕೈಯಲ್ಲಿ ಹಿಡಿದ ಬೆತ್ತದಿಂದ ಚುರುಕು ಮುಟ್ಟಿಸುತ್ತಿದ್ದ ಕಾರಣ ಮಕ್ಕಳೆಲ್ಲರೂ ಶಿಸ್ತು-ಸಂಯಮವನ್ನು ಕಲಿಯುತ್ತಿದ್ದರು. ಅದೇ ರೀತಿ ಮನೆಯಲ್ಲಿಯೂ ತಂದೆ-ತಾಯಿಯರೂ ಹಿರಿಯರು ಸಹ ಮಕ್ಕಳಿಗೆ ಸಂಸ್ಕಾರಗಳನ್ನು ಹೇಳಿಕೊಡುತ್ತಿದ್ದರು. ಆದರೆ ಇಂದು ಟಿವಿ ಮತ್ತು ಮೊಬೈಲ್‌ಗಳಿಂದಾಗಿ ಅವೆಲ್ಲವೂ ಮರೆಯಾಗಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅಪ್ಪ-ಅಮ್ಮಂದಿರು ಟಿವಿಯ ಮುಂದೆ ಗಂಟೆಗಟ್ಟಲೆ ಕೂರಲು ಆರಂಭಿಸಿದ ಸಮಯದಲ್ಲೇ, ಆನ್‌ಲೈನ್ ಕ್ಲಾಸ್ ಜೊತೆಗೆ ಅಗ್ಗದ ಮೊಬೈಲ್ ಡೇಟಾ ದೊರತ ಮೇಲಂತೂ ಮಕ್ಕಳು ತಂದೆ-ತಾಯಿಯರ ಹತೋಟಿ ಕೈತಪ್ಪಿದ್ದರು ಎಂದರೂ ತಪ್ಪಾಗದು.
ಈ ದಿನ ಪೋಷಕರಾಗಿ ಮಾಡಬೇಕಿರುವ ಪ್ರಮುಖ ಜವಾಬ್ದಾರಿಯೆಂದರೆ, ಮಕ್ಕಳ ಬೆಳವಣಿಗೆಗೆ ನಿಮ್ಮ ಕೊಡುಗೆ ಹೇಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸುವುದು. ದೇಶದ ಪ್ರತಿ ಮಗುವಿಗೂ ಕೂಡ ಶಿಕ್ಷಣ ದೊರಕುವಂತಾಗಬೇಕು. ಲಾಲನೆ-ಪಾಲನೆಯಲ್ಲಿ ಯಾವುದೇ ಕೊರತೆಯಾಗಬಾರದು. ಮಕ್ಕಳಿಗೆ ಉತ್ತಮ ಅರ್ಹತೆ ಬರುವ ನಿಟ್ಟಿನಲ್ಲಿ ಹಿರಿಯರು ಶ್ರಮವಹಿಸಬೇಕು.
ಒಟ್ಟಾರೆಯಾಗಿ ನಾವು ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಪ್ರತಿ ದಿನವೂ ಅವರ ಯೋಗಕ್ಷೇಮ ಮತ್ತು ಪ್ರಯೋಜನಕ್ಕಾಗಿ ಪ್ರತಿಜ್ಞೆ ಮಾಡಬೇಕು ಮತ್ತು ಅವರ ಕನಸುಗಳನ್ನು ಸುರಕ್ಷಿತವಾಗಿ ಸಾಧಿಸಲು ಸಹಾಯ ಮಾಡಬೇಕು.
ಹಾಗೆಯೇ ಮಕ್ಕಳ ಮೂಲಭೂತ ಹಕ್ಕುಗಳ ಬಗ್ಗೆ ಮಕ್ಕಳಷ್ಟೇ ಅಲ್ಲದೆ ಅವರ ಪಾಲಕರಿಗೆ ಕೂಡ ಸಂಪೂರ್ಣ ಮಾಹಿತಿ ನೀಡಿ ಅವರಲ್ಲಿ ಈ ವಿಷಯದ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸಲು ಪ್ರಯತ್ನಿಸಬೇಕು. ಹಾಗಾಗಿ ಈ ಮಕ್ಕಳ ದಿನ ನಾವು ಕಲಿಕೆಯನ್ನು ಸಕ್ರಿಯಗೊಳಿಸೋಣ, ಅವರ ಆರೋಗ್ಯಕ್ಕೆ ಆದ್ಯತೆ ನೀಡೋಣ ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳೋಣ.

-
ಬಸವರಾಜ ಎಮ್. ಯರಗುಪ್ಪಿ
ಶಿಕ್ಷಕರು, ಲಕ್ಷ್ಮೇಶ್ವರ.


