ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಮೇ 4ರಂದು ಸಂಜೆ 4ಕ್ಕೆ ನಗರಕ್ಕೆ ಆಗಮಿಸುತ್ತಿದ್ದು, ಎಲ್ಲರೂ ಸಮಾವೇಶವನ್ನು ಯಶಸ್ವಿಗೊಳಿಸಬೇಕಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿಯ ಸಭಾಭವನದಲ್ಲಿ ಮೇ 4ರಂದು ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಳ್ಳಲಿರುವ ಸಮಾವೇಶದ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ರಾಜ್ಯದ ಸಚಿವರು, ಕೇಂದ್ರದ ಹಾಗೂ ರಾಜ್ಯದ ನಾಯಕರು ಆಗಮಿಸಲಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಆಚರಿಸಿದ ಕನ್ನಡ ಸಂಭ್ರಮ ಹಬ್ಬವನ್ನು ರಾಜ್ಯದ ಜನರು ತಿಂಗಳವರೆಗೂ ಮಾತನಾಡುತ್ತಿದ್ದರು. ನಮ್ಮ ಸಂಘಟನೆಯ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಮೆಚ್ಚಿ ಸಂಭ್ರಮಿಸಿದರಲ್ಲದೇ, ಸಂತೋಷ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
ರಾಜ್ಯದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಪ್ರೇರಣೆ ಹಾಗೂ ಯೋಜನೆ ಅನುಷ್ಠಾನಕ್ಕೆ ಪ್ರೋತ್ಸಾಹ ನೀಡಿದ ಪ್ರಿಯಾಂಕಾ ಗಾಂಧಿ ಅವರು ಗದಗ ನಗರಕ್ಕೆ ಆಗಮಿಸುತ್ತಿರುವುರಿಂದ ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಅಲ್ಲದೇ, ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನದ ಮೂಲಕ ರಾಜ್ಯದ ಜನತೆಯನ್ನು ಕಾಂಗ್ರೆಸ್‌ನತ್ತ ಮುಖ ಮಾಡುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಸುಂಕಾಪುರ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ನಗರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಮುಖಂಡರಾದ ಜೂನಸಾಬ್ ನಮಾಜಿ, ಎಸ್.ಎನ್. ಬಳ್ಳಾರಿ, ರವಿ ಮೂಲಿಮನಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮವೂ ರಾಜ್ಯದ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿರುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ಆದ್ದರಿಂದ ನಾವು ಈ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಮಾಡುತ್ತಿದ್ದು, ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಸಮಾವೇಶದಲ್ಲಿ ಸೇರುವ ಜನರನ್ನು ನೋಡಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವು ನಿಶ್ಚಿತ ಎಂಬುದಾಗಿ ಸಂದೇಶ ಹೋಗಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.