ಬೆಂಗಳೂರು: ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ನೀಡಿದ ವಿವಾದಾತ್ಮಕ ಹೇಳಿಕೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇರಳದಲ್ಲಿ ನಡೆದ ತಮ್ಮ ಭಾಷಣದ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.
ಆ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಪ್ರಾಮಾಣಿಕ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಗುಜರಾತ್ ಜನರ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ. ಅವರಿಗೆ ನನಗೆ ಸದಾ ಗೌರವವಿದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಖರ್ಗೆ ಹೇಳಿದ್ದೇನು?
ಏಪ್ರಿಲ್ 5, 2026ರಂದು ಕೇರಳದ ಇಡುಕ್ಕಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಖರ್ಗೆ, ಕೇರಳದ ಜನರು ಹೆಚ್ಚು ವಿದ್ಯಾವಂತರಾಗಿದ್ದು, ಅವರನ್ನು ಸುಲಭವಾಗಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುಜರಾತ್ ಅಥವಾ ಇತರ ಪ್ರದೇಶಗಳ ಅನಕ್ಷರಸ್ಥರನ್ನು ಮರುಳು ಮಾಡಬಹುದು, ಆದರೆ ಕೇರಳದ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು.



