ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಆರೋಪದಡಿ ಬೆಳಗಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜ ಗಿರಿಯಪ್ಪನವರ ರನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಮಾನತು ಆದೇಶ ಹೊರಡಿಸಿದ್ದಾರೆ. ಗರ್ಭಿಣಿ ಮಹಿಳೆಯ ಶವಸಂಸ್ಕಾರದ ಸಂದರ್ಭದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಿಡಿಒ ನಾಗರಾಜ ಗಿರಿಯಪ್ಪನವರ ಭಾಗವಹಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಅಲ್ಲದೇ, ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯರನ್ನು ಕರೆಯಿಸಿ ಸಭೆ ನಡೆಸದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಯಾವುದೇ ಠರಾವು ಪಾಸ್ ಮಾಡಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಶವಸಂಸ್ಕಾರದ ವೇಳೆ ಪೊಲೀಸರು ಪಂಚಾಯತ್ ಸಿಬ್ಬಂದಿಯ ಸಹಾಯವನ್ನು ಕೇಳಿದರೂ ಅದಕ್ಕೂ ಸ್ಪಂದಿಸದೇ, ಶಿಷ್ಟಾಚಾರ ಪಾಲನೆ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಕೂಡ ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಲಾಗಿತ್ತು.



