ಮುಂಬೈ: ರಾಜ್ಯದಲ್ಲಿ ಮರಾಠಿ ಭಾಷೆಗೆ ಆದ್ಯತೆ ನೀಡುವುದು ಅಗತ್ಯವಾದರೂ, ಅದರ ಹೆಸರಿನಲ್ಲಿ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಚ್ಚರಿಕೆ ನೀಡಿದ್ದಾರೆ.
ಮುಂಬೈ ಸಮೀಪದ ಥಾಣೆ ಪ್ರದೇಶದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಚೇರಿ ಬಳಿ ಮರಾಠಿಯೇತರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಎಚ್ಚರಿಕೆ ನೀಡುವ ಬ್ಯಾನರ್‌ಗಳನ್ನು ಅಳವಡಿಸಿರುವ ಹಿನ್ನೆಲೆ ಉಂಟಾದ ಉದ್ವಿಗ್ನ ಪರಿಸ್ಥಿತಿಗೆ ಪ್ರತಿಕ್ರಿಯೆ ನೀಡಿದ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಮುಂಬೈನಂತಹ ಮಹಾನಗರಗಳು ಹಾಗೂ ರಾಜ್ಯದಾದ್ಯಂತ ಮರಾಠಿ ಭಾಷೆಯ ಪ್ರಚಾರ ಮಾಡುವುದು ತಪ್ಪಲ್ಲ. ಆದರೆ, ಅದನ್ನು ಜವಾಬ್ದಾರಿಯುತವಾಗಿ ನಡೆಸಬೇಕು. ಭಾಷೆ ತಿಳಿಯದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತರಬೇತಿ ನೀಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ. ಭಾಷೆಯ ಹೆಸರಿನಲ್ಲಿ ಬಲವಂತ ಅಥವಾ ಹಿಂಸಾಚಾರಕ್ಕೆ ತೊಡಗುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಮೇ 1ರಿಂದ ರಾಜ್ಯದಾದ್ಯಂತ ಆಟೋ ಮತ್ತು ಟ್ಯಾಕ್ಸಿ ಚಾಲಕರ ಮರಾಠಿ ಪ್ರಾವೀಣ್ಯತೆ ಮೌಲ್ಯಮಾಪನ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.
ಮರಾಠಿಯೇತರ ಚಾಲಕರಿಗೆ ಭಾಷಾ ತರಬೇತಿ ನೀಡಲು ಸರ್ಕಾರ ಕೊಂಕಣ ಮರಾಠಿ ಸಾಹಿತ್ಯ ಪರಿಷತ್ ಮತ್ತು ಮುಂಬೈ ಮರಾಠಿ ಸಾಹಿತ್ಯ ಸಂಘದಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ, ಮೂಲ ಮರಾಠಿ ಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಮಾತನಾಡುವ ಸಾಮರ್ಥ್ಯದ ಆಧಾರದ ಮೇಲೆ ಚಾಲಕರನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಹತೆ ಪಡೆದವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ.



