ಮಾರ್ಕ್ ಚಿತ್ರದ ಪ್ರೀ–ರಿಲೀಸ್ ವೇದಿಕೆಯಿಂದ ಆರಂಭವಾದ ಹೇಳಿಕೆಗಳ ಸರಣಿ ಇದೀಗ ಸ್ಟಾರ್ ಟಾಕ್ ವಾರ್ ರೂಪ ಪಡೆದಿದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನೀಡಿದ ಟಾಂಗ್ ಮಾತುಗಳು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಈ ಬೆಳವಣಿಗೆಯ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ, “ದರ್ಶನ್ ಇಲ್ಲದಾಗ ಕೆಲವರು ವೇದಿಕೆಗಳ ಮೇಲೆ, ಚಾನಲ್‌ಗಳಲ್ಲಿ ಕುಳಿತು ಏನೇನೋ ಮಾತಾಡುತ್ತಾರೆ. ಆದರೆ ಅವರು ಬಂದಾಗ ಎಲ್ಲಿರುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ” ಎಂದು ಪರೋಕ್ಷವಾಗಿ ಟೀಕಿಸಿದ್ದರು. ಜೊತೆಗೆ, “ಯಾರು ಏನೇ ಅಂದರೂ ಕೋಪ ಮಾಡಿಕೊಳ್ಳಬೇಡಿ, ಬೇಜಾರ್ ಮಾಡಿಕೊಳ್ಳಬೇಡಿ” ಎಂಬ ಸಂದೇಶವನ್ನೂ ನೀಡಿದ್ದಾರೆ.
ಈ ಮಾತುಗಳಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡ್ತಾರಾ? ಅಥವಾ “ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ” ಎನ್ನುವ ಹೇಳಿಕೆಗೆ ಸ್ಪಷ್ಟನೆ ಕೊಡ್ತಾರಾ? ಎಂಬ ಪ್ರಶ್ನೆಗಳು ಈಗ ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತಿವೆ. ಈ ಎಲ್ಲದ ನಡುವೆಯೂ ಕಿಚ್ಚ ಸುದೀಪ್ ಮಾರ್ಕ್ ರಿಲೀಸ್ ಕೌಂಟ್‌ಡೌನ್ ಪೋಸ್ಟ್ ಹಾಕಿರುವುದು, ವಿವಾದಕ್ಕಿಂತ ಸಿನಿಮಾಗೆ ಹೆಚ್ಚು ಗಮನ ನೀಡುತ್ತಿರುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ, ಮಾರ್ಕ್ ಸಿನಿಮಾ ಬಿಡುಗಡೆಯ ಮುನ್ನವೇ ಸ್ಟಾರ್ ಹೇಳಿಕೆಗಳು, ಪ್ರತಿಕ್ರಿಯೆಗಳು ಹಾಗೂ ಅಭಿಮಾನಿಗಳ ಟಾಕ್ ವಾರ್ ಕನ್ನಡ ಸಿನಿರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.



