ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭೀಕರ ಸ್ಫೋಟ ಸಂಭವಿಸಿದೆ. ಹರಿಯಾಣದ ಫರಿದಾಬಾದ್ನಿಂದ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದ್ದು, ಅದೇ ಸ್ಥಳದಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದ ಪರಿಣಾಮ 6 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ, 27 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆ ಆವರಣದಿಂದ ಭಾರೀ ಪ್ರಮಾಣದ ಹೊಗೆ ಮತ್ತು ಜ್ವಾಲೆಗಳು ಎದ್ದಿದ್ದು, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿ ಸ್ಫೋಟದ ಭಯಾನಕತೆಯನ್ನು ಸ್ಪಷ್ಟವಾಗಿ ತೋರಿಸಿದೆ. ಗಾಯಗೊಂಡ ಪೊಲೀಸರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಗಾಯಾಳುಗಳಲ್ಲಿ ಹೆಚ್ಚಿನವರು ಪೊಲೀಸ್ ಮತ್ತು ವಿಧಿವಿಜ್ಞಾನ ಅಧಿಕಾರಿಗಳು ಎಂದು ಮೂಲಗಳು ತಿಳಿಸಿವೆ. ಸದ್ಯ ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ಧಾವಿಸಿದ್ದು, ತನಿಖೆ ನಡೆಯುತ್ತಿದೆ. ಶ್ರೀನಗರ ಉಪ ಆಯುಕ್ತ ಅಕ್ಷಯ್ ಲ್ಯಾಬ್ರೂ ಜಮ್ಮು ಮತ್ತು ಕಾಶ್ಮೀರದ ನೌಗಾಮ್ ಪೊಲೀಸ್ ಠಾಣೆ ಬಳಿ ನಡೆದ ಸ್ಫೋಟದ ಸಂತ್ರಸ್ತರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.



