ಮುಂಬೈ: ಮಹಾರಾಷ್ಟ್ರದ ಅಮರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ನವಜಾತ ಶಿಶುಗಳು ಮೃತಪಟ್ಟಿದ್ದಾರೆ.
ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ ವೆಂಟಿಲೇಟರ್ ಸ್ಫೋಟಗೊಂಡಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಘಟನೆ ವೇಳೆ ವಾರ್ಡ್‌ನಲ್ಲಿ ಒಟ್ಟು 39 ನವಜಾತ ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದರು.
ವೆಂಟಿಲೇಟರ್ ಸ್ಫೋಟಗೊಂಡ ಬಳಿಕ ವಾರ್ಡ್‌ನಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿದೆ. ತೀವ್ರ ಸುಟ್ಟಗಾಯಗಳು ಹಾಗೂ ಹೊಗೆಯಿಂದ ಉಸಿರುಗಟ್ಟಿ ಮೂವರು ನವಜಾತ ಶಿಶುಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ವಾರ್ಡ್‌ನಲ್ಲಿದ್ದ ಶಿಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಅವಘಡದಿಂದ ತೊಂದರೆಗೊಳಗಾದ ಆರು ನವಜಾತ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದ ಶಿಶುಗಳ ಸುರಕ್ಷತೆ ಹಾಗೂ ಆರೋಗ್ಯದ ಮೇಲೂ ವೈದ್ಯರು ನಿಗಾ ವಹಿಸಿದ್ದಾರೆ.
ವೆಂಟಿಲೇಟರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಲಭ್ಯವಾಗುವ ನಿರೀಕ್ಷೆಯಿದೆ.



