ವಿಜಯಸಾಕ್ಷಿ ಸುದ್ದಿ, ಗದಗ : ಸಹಕಾರಿ ಸಂಘಗಳ ಉದಯದಲ್ಲಿ ಗದಗ ಜಿಲ್ಲೆಯದು ಅದ್ವಿತೀಯ ಸಾಧನೆ. ಏಷ್ಯಾ ಖಂಡದಲ್ಲೇ ಪ್ರಥಮವಾಗಿ ಸಹಕಾರ ಸಂಘ ಸ್ಥಾಪಿಸಿ, ಸಹಕಾರಿ ಕ್ಷೇತ್ರಕ್ಕೆ ಮುನ್ನುಡಿ ಬರೆದಿದ್ದು ನಮ್ಮ ಗದಗ ಜಿಲ್ಲೆ. ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮವಾಗಿ ಸಹಕಾರಿ ಸಂಘ ಸ್ಥಾಪಿಸುವ ಮೂಲಕ ಹೊಸದೊಂದು ಭಾಷ್ಯ ಬರೆದವರು, ಸಹಕಾರಿ ರಂಗದ ಪಿತಾಮಹ ಎಂದೇ ಹೆಸರಾಗಿರುವವರು ಕಣಗಿನಹಾಳದ ಯಜಮಾನ ಸಿದ್ದನಗೌಡ ಪಾಟೀಲರು.
ದೇಶದ ಎಲ್ಲ ಸಹಕಾರಿ ಸಂಘಗಳ ಕಚೇರಿಯಲ್ಲಿ ಯಜಮಾನ ಸಿದ್ದನಗೌಡ ಪಾಟೀಲರ ಭಾವಚಿತ್ರ ಇಟ್ಟು, ಸ್ಮರಿಸಲಾಗುತ್ತದೆ. ಸಭೆ-ಸಮಾರಂಭಗಳಲ್ಲಿ ಕಣಗಿನಹಾಳ ಸಿದ್ದನಗೌಡ ಪಾಟೀಲರನ್ನು ನೆನೆಯುತ್ತಾ ಭಾಷಣ ಮಾಡಿ, ಅವರ ಸಾಧನೆಯನ್ನು ಕೊಂಡಾಡುತ್ತಾರೆ. ಆದರೆ ದುರಂತವೆಂದರೆ, ಇವರ ಸಾಧನೆಗೆ ಹೆಮ್ಮೆ ಪಡೆಬೇಕಾದ ಹುಟ್ಟೂರು ಕಣಗಿನಹಾಳ ಗ್ರಾಮದಲ್ಲೇ ಅವರ ಪುತ್ಥಳಿಗೆ ಸೂಕ್ತ ಗೌರವ ಸಿಗುತ್ತಿಲ್ಲ!
ಪುತ್ಥಳಿಯ ಸುತ್ತಮುತ್ತ ಕಸದ ಕೊಂಪೆಯೇ ನಿರ್ಮಾಣವಾಗಿದ್ದು, ಈ ಸ್ಥಳದಲ್ಲಿ ದೇಶವೇ ತಿರುಗಿನೋಡುವಂತೆ ಸಾಧನೆ ಮಾಡಿದ ವ್ಯಕ್ತಿಯೊಬ್ಬರ ಗೌರವಾರ್ಥವಾಗಿ ಸ್ಥಾಪಿಸಿರುವ ಪುತ್ಥಳಿಯಿದೆ ಎಂಬುದು ತಿಳಿಯುವಂತಿಲ್ಲ. ಅವರಿಗೆ ಅಗೌರವ ತಂದಿರುವುದು ಬೇಸರದ ಸಂಗತಿಯಾಗಿದೆ ಎಂದು ಕಣಗಿನಹಾಳ ಗ್ರಾಮದ ಹಾಲಪ್ಪ ಹೊಂಬಳರವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಹಕಾರಿ ಸಂಘದ ಬಗ್ಗೆ ನಮ್ಮ ಜನಪ್ರತಿನಿಧಿಗಳು ಮಾತನಾಡುವಾಗ ಸಿದ್ದನಗೌಡ ಪಾಟೀಲರನ್ನು ನೆನೆಯುತ್ತಾ ಭಾಷಣ ಮಾಡುತ್ತಾರೆ. ಆದರೆ ಹಾಗೆಯೇ ಮರೆತುಬಿಡುತ್ತಾರೆ. ಅವರ ಸ್ವಗ್ರಾಮದಲ್ಲಿಯೇ ಅವರ ಪುತ್ಥಳಿ ಹೀಗೆ ನಿರ್ಲಕ್ಷö್ಯಕ್ಕೊಳಗಾಗಿರುವುದು ಬೇಸರದ ಸಂಗತಿ. ಈ ಬಗ್ಗೆ ಕಣಗಿನಹಾಳ ಗ್ರಾಮ ಪಂಚಾಯಿತಿ, ಗದಗ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಗಮನವಹಿಸಿ, ಈ ಸ್ಥಳದಲ್ಲಿ ತುಂಬಿರುವ ಕಸ-ಕಡ್ಡಿಗಳನ್ನು ತೆರವುಗೊಳಿಸಿ, ಸಹಕಾರಿ ರಂಗದ ಪಿತಾಮಹನ ಪುತ್ಥಳಿಗೆ ಗೌರವ ತೋರಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಗ್ರಾಮಸ್ಥರಾದ ನೀಲಪ್ಪ ಕುರಿ, ಹುಚ್ಚೀರಪ್ಪ ಕುರಿ, ಬಸಪ್ಪ ಹಾಲಣ್ಣವರ, ಅರ್ಜುನ ಕುರಿ ಮುಂತಾದವರು ಆಗ್ರಹಿಸಿದ್ದಾರೆ.
ಕಣಗಿನಹಾಳ ಗದಗ ತಾಲೂಕಿನ ಪುಟ್ಟ ಹಳ್ಳಿ. ಇಡೀ ದೇಶವೇ ಹೆಮ್ಮೆ ಪಡುವಂತೆ ಕಣಗಿನಹಾಳ ಗ್ರಾಮದಲ್ಲಿ 1905ರಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘವನ್ನು ಸ್ಥಾಪಿಸಿದವರು ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ (1843-1933). ಇವರ ನೇತೃತ್ವದಲ್ಲಿ 1905ರ ಜುಲೈ 8ರಂದು ಕಣಗಿನಹಾಳ ಕೃಷಿ ಸಹಕಾರಿ ಸಂಘ ಸ್ಥಾಪನೆಯಾಯಿತು. ಈ ಸಂಘ ಸ್ಥಾಪನೆಯಾದಾಗ, ಜಮಾ ಆಗಿದ್ದ 2 ಸಾವಿರ ರೂಪಾಯಿಗಳನ್ನು ಗ್ರಾಮದಲ್ಲಿ ರೈಲ್ವೆ ನಿಲ್ದಾಣವನ್ನು ನಿರ್ಮಿಸಲು ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಬಳಸಲಾಯಿತು. ತನ್ನ ಸಮಾಜಕ್ಕಾಗಿ ಅವಿರತ ಸೇವೆ ಸಲ್ಲಿಸಿದ ಯಜಮಾನ ಸಿದ್ದನಗೌಡ ಪಾಟೀಲರಿಗೆ ಸಲ್ಲಿಸಲಾಗುತ್ತಿರುವ ಅಗೌರವದ ಬಗ್ಗೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.