ವಿಜಯಸಾಕ್ಷಿ ಸುದ್ದಿ, ಹಾವೇರಿ (ಸವಣೂರು): ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗ ದೊರಕುವುದು ಅತ್ಯಂತ ಮುಖ್ಯ. ಕನ್ನಡಿಗರಿಗೆ ಕೆಲಸ ಸಿಕ್ಕರೆ ಸ್ವಾಭಿಮಾನ ಬರುತ್ತದೆ; ಕನ್ನಡಿಗರಿಗೆ ಸ್ವಾಭಿಮಾನದ ಬದುಕು ಸಿಕ್ಕರೆ ಕನ್ನಡಕ್ಕೂ ಗೌರವ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಗುಂಡೂರ ಗ್ರಾಮದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಹಾಗೂ ‘ಕೀರ್ತಿ ಕನ್ನಡ ಕಲೋತ್ಸವ–2025’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಶಂಕರಗೌಡರು ತಮ್ಮ ಬೇರುಗಳನ್ನು ಮರೆತಿಲ್ಲ. ಯಾವ ನೆಲ ಅನ್ನ, ಆಶ್ರಯ ಕೊಟ್ಟಿದೆಯೋ, ಆ ನೆಲದ ಋಣ ತೀರಿಸಬೇಕೆಂದು ಪದವಿ ಕಾಲೇಜು ಸ್ಥಾಪಿಸಿದ್ದಾರೆ. ಕಷ್ಟಪಟ್ಟು ಕಾಲೇಜು ತೆರೆದು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗಬೇಕು,” ಎಂದರು.
“ನಾವು ಸರ್ಕಾರಿ ಪದವಿ ಕಾಲೇಜು, ಪಿಯುಸಿ ಕಾಲೇಜು, ಮೊರಾರ್ಜಿ ಕಾಲೇಜು, ಐಟಿಐ ಹಾಗೂ ಆಯುರ್ವೇದಿಕ್ ಕಾಲೇಜುಗಳನ್ನು ಸವಣೂರಿನಲ್ಲಿ ಸ್ಥಾಪಿಸಿದ್ದೇವೆ. ಶಿಗ್ಗಾವಿಯಲ್ಲಿ ಪಾಲಿಟೆಕ್ನಿಕ್, ಐಟಿಐ, ಜಿಟಿಟಿಸಿ, ಪಶುವೈದ್ಯಕೀಯ ಐಟಿಐ ಶಿಕ್ಷಣ ಸಂಸ್ಥೆಗಳನ್ನು ನಮ್ಮ ಕ್ಷೇತ್ರಕ್ಕೆ ತಂದಿರುವ ಹೆಮ್ಮೆ ನನಗಿದೆ. ಮುಂದೆಯೂ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ತರಲು ಆಸೆ ಇದೆ,” ಎಂದರು.
“ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಬೆಂಗಳೂರಿನಲ್ಲಿ ಶೇ.65ರಷ್ಟು ಜನರು ಹೊರಗಿನವರೇ ಇದ್ದಾರೆ. ನಾನು ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಉತ್ತರ ಭಾರತೀಯರು ಹೆಚ್ಚಾಗಿ ಇದ್ದರು. ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವುದು ಬಹಳ ಮುಖ್ಯ. ಎಲ್ಲ ಹಂತಗಳಲ್ಲಿ ಕನ್ನಡ ಕಡ್ಡಾಯ ಮಾಡುವ ಕಾನೂನು ನಾನು ತಂದಿದ್ದೆ, ಆದರೆ ಅದನ್ನು ಇಂದಿನ ಸರ್ಕಾರ ಅನುಷ್ಠಾನಗೊಳಿಸುತ್ತಿಲ್ಲ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಕನ್ನಡವನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಸವಣೂರಿನ ಕೀರ್ತಿ ಸಂಸ್ಥೆ ಅದನ್ನು ಯಶಸ್ವಿಯಾಗಿ ಮಾಡುತ್ತಿದೆ,” ಎಂದು ಪ್ರಶಂಸಿಸಿದರು.
ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ ಅವರು, “ಜ್ಞಾನ ಮತ್ತು ಧ್ಯಾನ ಎರಡೂ ಮುಖ್ಯ. ಯಾಕೆ, ಏನು, ಎಲ್ಲಿ, ಎಷ್ಟು ಎಂಬ ಪ್ರಶ್ನೆಗಳನ್ನು ಹಾಕುವುದರಿಂದ ತಾರ್ಕಿಕ ಚಿಂತನೆ ಬೆಳೆಯುತ್ತದೆ. ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಒಮ್ಮೆ ವಿದ್ಯಾರ್ಥಿ ಆದ ಮೇಲೆ ಜೀವನಪರ್ಯಂತ ವಿದ್ಯಾರ್ಥಿಯಾಗಿಯೇ ಇರಬೇಕು. ಜ್ಞಾನ ಹೊಂದಿರುವವನೇ ಜಗತ್ತನ್ನು ಆಳುತ್ತಾನೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಷ.ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠ, ಬೆಂಗಳೂರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಅಧ್ಯಕ್ಷೆ ಶಶಿಕಲಾ ಪೊಲೀಸ್‌ಗೌಡ್ರ, ಶಂಕರಗೌಡ ಪೊಲೀಸ್‌ಗೌಡ್ರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.



