ವಿಜಯಸಾಕ್ಷಿ ಸುದ್ದಿ, ಮುಳಗುಂದ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಹಜರತ್ ಹಫೀಜ್ ಸೈಯದ್ ಮಹಮ್ಮದಅಲಿ ಅಲ್-ಹುಸೇನಿಸಾಹೇಬ ಹೇಳಿದರು.
ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾ ಭವನದಲ್ಲಿ ಭಾನುವಾರ ಅಂಜುಮನ್-ಏ-ಇಸ್ಲಾಂ ಕಮಿಟಿ ವತಿಯಿಂದ ಪ್ರವಾದಿ ಹಜರತ್ ಮುಹಮ್ಮದ ಪೈಗಂಬರ ರಸೂಲಲ್ಲಾ ಅವರ 1500ನೇ ಜಯಂತ್ಯುತ್ಸವದ ಅಂಗವಾಗಿ ಪ್ರಥಮ ಬಾರಿಗೆ ನಡೆದ ಇಸ್ಲಾಂ ಧರ್ಮದ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಸಾಮಾಜಿಕ ಸಮನ್ವಯ, ದೇಶದ ಬೆಳವಣಿಗೆಗೆ ಹಿಂದೂ-ಮುಸ್ಲಿಮರು ಐಕ್ಯತೆಯಿಂದ ಇರಬೇಕು. ಮನಸು ಒಡೆಯುವವರಿಂದ ದೂರ ಇದ್ದು, ಮನಸ್ಸು ಕೂಡಿಸುವರೊಂದಿಗೆ ಸೇರಿ ನಿಮ್ಮ ನವ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಆರ್ಥಿಕ ಹೊರೆ ತಡೆಯಬಹುದು. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿಯಾಗಿದೆ. ಈ ಉತ್ತಮ ಸಾಮಾಜಿಕ ಕಾರ್ಯವನ್ನು ಮಾಡಿದ ಅಂಜುಮನ್-ಏ-ಇಸ್ಲಾಂ ಕಮಿಟಿ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಸಮ್ಮುಖ ವಹಿಸಿದ್ದ ಸಜ್ಜಾದಾ ನಸೀನ ನೀಲಂಗಾ ಶರೀಫ ಮಹಾರಾಷ್ಟ್ರದ ಹಜರತ್ ಸೈಯದಶಾ ಹೈದರವಲಿ ನಬೀರಾ ಖಾದ್ರಿ ಮಾತನಾಡಿ, ಇದು ಭಾರತೀಯ ಸಂಸ್ಕೃತಿ, ಸಂಪ್ರದಾಯ. ಸೌಹಾರ್ದತೆಯಿಂದ ಈ ಅರ್ಥಪೂರ್ಣ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ವಾಗತಾರ್ಹವಾಗಿದೆ ಎಂದರು.
ಧಾರವಾಡ ಮುರುಘಾಮಠ, ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಅನಗತ್ಯ ಆರ್ಥಿಕ ಅಪಮೌಲ್ಯ ತಡೆದು ಸಾಮಾಜಿಕ ಜೀವನಕ್ಕೆ ಸಹಕಾರ ನೀಡುವ ಸಾಮೂಹಿಕ ವಿವಾಹ ಯೋಜನೆ ಇತರರಿಗೂ ಮಾದರಿಯಾಗಬೇಕು. ಪರರಿಗೆ ಉಪಕಾರ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ತಾಜುದ್ದೀನ ಕಿಂಡ್ರಿ ವಹಿಸಿದ್ದರು.
ಮಾಜಿ ಸಂಸದ ಐ.ಜಿ. ಸನದಿ, ಜನಾಬ ಮಹಮ್ಮದ ಇಸ್ಮಾಯಿಲ್ ಖಾಜಿ, ಮುಖಂಡರಾದ ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಗುರಣ್ಣ ಬಳಗಾನೂರ, ಹುಮಾಯನ್ ಮಾಗಡಿ, ಬಸವರಾಜ ಸುಂಕಾಪುರ, ರಾಮಣ್ಣ ಕಮಾಜಿ, ಸೈಯ್ಯದಲಿ ಶೇಖ ಸೇರಿದಂತೆ ಕಮಿಟಿ ಪದಾಧಿಕಾರಿಗಳು ಹಾಗೂ ಗುರು-ಹಿರಿಯರು ಇದ್ದರು.
ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಶ್ರೀಗಳು ಮಾತನಾಡಿ,
ಮನುಷ್ಯ, ಮನುಷ್ಯನನ್ನು ಪ್ರೀತಿಸಬೇಕು. ಮನುಷ್ಯನಲ್ಲಿ ಮೊದಲು ಮನುಷ್ಯತ್ವ ಮುಖ್ಯವಾಗಿರಬೇಕು. ಎಲ್ಲ ಧರ್ಮಗಳು ಹೇಳಿದಂತೆ, ನಿನ್ನನ್ನು ನೀ ಹೇಗೆ ಪ್ರೀತಿಸುತ್ತೀಯೋ, ಅದೇ ರೀತಿ ಪರಸ್ಪರರನ್ನು ಪ್ರೀತಿಯಿಂದ ಕಂಡು ಪ್ರೀತಿ, ವಿಶ್ವಾಸ, ಸ್ನೇಹದಿಂದ ಬದುಕಬೇಕು. ಸ್ವಾರ್ಥವನ್ನ ಬಿಟ್ಟು ಸಾರ್ಥಕತೆಯ ಜೀವನ ನಡೆಸಬೇಕು. ಈ ಎಲ್ಲ ಗುಣಗಳನ್ನು ನವ ವಧು-ವರರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಡೆಸಬೇಕು ಎಂದರು.


