ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮಾಜದಲ್ಲಿ ವಿಕಲಚೇತನರಿಗೆ ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಕೇಂದ್ರ ಸರಕಾರದ ಸಿಎಸ್‌ಆರ್ ಫಂಡ್‌ನಿಂದ ಪ್ರತಿವರ್ಷ ಎಲ್ಲೆಡೆ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಧನ-ಸಲಕರಣೆಗಳ ಅಳತೆ ಹಾಗೂ ಮೌಲ್ಯಮಾಪನ ತಪಾಸಣೆ ಮಾಡಿ ಅವರಿಗೆ ಅವಶ್ಯವಿರುವ ಸಲಕರಣೆಗಳನ್ನು ಉಚಿತವಾಗಿ ನೀಡುವ ಕಾರ್ಯವನ್ನು ಮಾಡುತ್ತಿದೆ. ಇಂತಹ ಮಹತ್ವದ ಯೋಜನೆಗಳು ಅವಶ್ಯವಿದ್ದವರಿಗೆ ತಲುಪುವಂತೆ ಮಾಡಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲ್ಯಾಣ ಅಧಿಕಾರಿ ಮಹಾಂತೇಶ ಕುರಿ ಹೇಳಿದರು.
ಅವರು ಬುಧವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಲಿಂಕೋ ಸಂಸ್ಥೆ ಬೆಂಗಳೂರು ಇವರ ಸಹಯೋಗದೊಂದಿಗೆ ತಾಲೂಕಿನ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಧನ-ಸಲಕರಣೆಗಳ ಅಳತೆ ಹಾಗೂ ಮೌಲ್ಯಮಾಪನ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಕಲಚೇತನರೊಂದಿಗೆ ಹಿರಿಯ ನಾಗರಿಕರನ್ನು ಈ ಯೋಜನೆಗಳಲ್ಲಿ ಬರುವಂತೆ ಮಾಡಿದ್ದು, ಅನೇಕ ಸಾಧನ-ಸಲಕರಣೆಗಳನ್ನು ಕೊಳ್ಳುವದು ಸಹ ಅವರಿಗೆ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂಲಕ ಉಚಿತವಾಗಿ ಸಾಧನೆ ಸಲಕರಣೆಗಳನ್ನು ನೀಡಲಾಗುತ್ತಿದೆ. ಇದೀಗ ಅವುಗಳ ಅಳತೆ, ಮೌಲ್ಯಮಾಪನ ಮಾಡಿಕೊಂಡು ನಂತರ 2 ತಿಂಗಳಲ್ಲಿ ಇವುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಎಲ್ಲರೂ ಸಹಕಾರದಿಂದ ಪಾಲ್ಗೊಳ್ಳುವಂತೆ ತಿಳಿಸಿದರು.
ಇಲಾಖೆಯ ಮಾಹಿತಿಯ ಪ್ರಕಾರ, ತಾಲೂಕಿನಲ್ಲಿ 1585 ವಿಕಲಚೇತನರು ಇದ್ದು, ಹಿರಿಯ ನಾಗರಿಕರು ಒಟ್ಟು 6768 ಜನರಿದ್ದಾರೆ. ಈ ಯೋಜನೆಯ ಲಾಭ ಪಡೆದುಕೊಳ್ಳಲು ವೈದ್ಯಕೀಯ ಪ್ರಮಾಣಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅವಶ್ಯವಾಗಿದ್ದು, ಮುಂಜಾನೆಯಿಂದಲೇ ಜನರು ಆಸ್ಪತ್ರೆಯ ಎದುರಿನಲ್ಲಿ ಜಮಾಯಿಸಿದ್ದರು.
ಚಿಕ್ಕ ಚಿಕ್ಕ ವಿಕಲಚೇತನ ಮಕ್ಕಳು, ನಡೆಯಲಾರದವರು, ಅಪಘಾತಗಳಲ್ಲಿ ಕಾಲು-ಕೈ ಕಳೆದುಕೊಂಡವರು, ಕಿವಿ, ಕಣ್ಣಿನ ಸಮಸ್ಯೆ ಇರುವವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸುಮಾರು 300ಕ್ಕೂ ಅಧಿಕ ಜನರ ತಪಾಸಣೆ, ಅಳತೆ ಕಾರ್ಯವನ್ನು ಅಲಿಂಕೋ ಸಂಸ್ಥೆಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕಿ ಪ್ರತಿಭಾ ಮಾದರ, ತಾಲೂಕಾ ಪುನರ್ವಸತಿ ಕಾರ್ಯಕರ್ತೆ ಭಾರತಿ ಮೂರಶಿಳ್ಳಿ, ನಗರ ಪುನರ್ವಸತಿ ಕಾರ್ಯಕರ್ತ ಮಂಜುನಾಥ ರಾಮಗೇರಿ, ವನಜಾಕ್ಷಿ ಹಾಲಗಿಮಠ ಸೇರಿದಂತೆ ನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇದ್ದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ತಾಲೂಕಿನ 14 ಗ್ರಾ.ಪಂ ವ್ಯಾಪ್ತಿಯಿಂದ ಸಾವಿರಾರು ಜನರು ಜಮಾಯಿಸಿದ್ದರು. ವಿಕಲಚೇತರಿಗೆ, ಹಿರಿಯ ನಾಗರಿಕರಿಗೆ ಅವಶ್ಯವಿರುವ ಬ್ಯಾಟರಿ ಚಾಲಿತ ವೀಲ್‌ಚೇರ್, ಶ್ರವಣ ಯಂತ್ರ, ಗಾಲಿ ಕುರ್ಚಿ, ವಾಟರ್ ಬೆಡ್, ವೀಲ್ ಚೇರ್, ತ್ರಿಚಕ್ರ ಸೈಕಲ್, ಕೃತಕ ಕಾಲು-ಕೈ ಸೇರಿದಂತೆ ಅನೇಕ ಪರಿಕರಗಳ ಬಗ್ಗೆ ಬೆಂಗಳೂರಿನ ಅಲಿಂಕೋ ಸಂಸ್ಥೆಯವರು ಅಳತೆ ಮೌಲ್ಯಮಾಪನ ಮಾಡಿದರು.