ಬೆಂಗಳೂರು: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಇದನ್ನು ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಸರಕಾರವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ನಾಗರಿಕ ಸರಕಾರ ಎನ್ನುವುದು, ಗೃಹ ಸಚಿವರು ಎನ್ನುವವರು ಇದ್ದಾರೆಯೇ? ಎಂದು ಕೇಂದ್ರ ಸಚಿವರು ಕಿಡಿಕಾರಿದರು.
2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂಥ ಕಿಡಿಗೇಡಿ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನನ್ನ ಸರಕಾರ ಹೋಯಿತು, ಆ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ, ಜನರು ಪಡೆದ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಪರಿಹಾರೋಪಾಯ ಏನು? ಎಂಬ ಬಗ್ಗೆ ನಾನು ಆಗ ಆಲೋಚನೆ ಮಾಡಿದ್ದೆ. ಆ ಸಂದರ್ಭದಲ್ಲಿ ಕೇರಳ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಒಂದು ಆಯೋಗವನ್ನು ರಚನೆ ಮಾಡಿತ್ತು. ಆ ಮಾಹಿತಿ ನನಗಿತ್ತು. ಕೇರಳಕ್ಕೆ ತೆರಳಿ ಖುದ್ದು ಆ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ನಾನು ಅಂದಿನ ನನ್ನ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ನೇತೃತ್ವದ ನಿಯೋಗವನ್ನು ಕೇರಳಕ್ಕೆ ಕಳಿಸಿದ್ದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ನಾನು ಇಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದೆ. ಆಮೇಲೆ ಅದು ಏನಾಯಿತು? ಎಂದು ಅವರು ಪ್ರಶ್ನಿಸಿದರು.
ನನ್ನ ಸರಕಾರ ಹೋದ ನಂತರ ಬಂದ ಸರ್ಕಾರಗಳು ಈ ಕಾಯ್ದೆಯ ಮಹತ್ವವನ್ನೇ ಅರಿತುಕೊಳ್ಳಲಿಲ್ಲ. ಅದರ ಪರಿಣಾಮವೇ ಮೈಕ್ರೋ ಫೈನಾನ್ಸ್ ಗಳ ಉಪಟಳ ಜಾಸ್ತಿ ಆಗಿರುವುದು. ಖಾಸಗಿ ಹಣಕಾಸು ಸಂಸ್ಥೆಗಳು ಯಾವುದೇ ಪರವಾನಗಿ ಅಥವಾ ಅನುಮತಿಯನ್ನೇ ಪಡೆಯದೇ ಕಾನೂನುಬಾಹಿರವಾಗಿ ಈ ರೀತಿ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಾಳಲಾರದೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ, ಊರನ್ನೇ ಖಾಲಿ ಮಾಡಿ ಹೋಗುವ ದುಸ್ಥಿತಿ ಸೃಷ್ಟಿಯಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.