2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

Advertisement

ಶುಕ್ರವಾರ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ಕಲಾ ಭವನದಲ್ಲಿ ಭಾರತೀಯ ಜನತಾ ಪಕ್ಷದ ರೋಣ ವಿಧಾನಸಭಾ ಮತಕ್ಷೇತ್ರದ ಡಂಬಳ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿಕಟಪೂರ್ವ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತೀರಿ ಎನ್ನುವ ವಿಶ್ವಾಸವಿದೆ. ರಾಜಕಾರಣ ವೇಗವಾಗಿ ಬದಲಾಗುತ್ತಿದೆ. ಕೇವಲ ಎರಡು ವರ್ಷದಲ್ಲಿ ಕಾಂಗ್ರೆಸ್ ವಿರುದ್ಧ ಜನತೆ ಬಂಡಾಯ ಎದ್ದಿದೆ. ನಮ್ಮ ಸರ್ಕಾರ ಇದ್ದಾಗ ರೈತರ ಮಕ್ಕಳಿಗೆ ತಂದಿದ್ದ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದರು. ರೈತರಿಗೆ ಡಿಸೆಲ್, ಪೈಪು, ಪಂಪ್‌ಸೆಟ್ ಸಬ್ಸಿಡಿಗಳನ್ನು ನಿಲ್ಲಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ರಾಜ್ಯದಲ್ಲಿ ಬಡವರ ವಿರೋಧಿ ಸರ್ಕಾರ ಇದೆ. ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ದರ, ಪೆಟ್ರೋಲ್ ಬೆಲೆ, ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದರು. ಎರಡು ವರ್ಷದಲ್ಲಿ ಮೂರು ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಸಾಲ ಹೊರಿಸಿದ್ದಾರೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಇದರ ವಿರುದ್ಧ ನಾವು ಮಂಡಲ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಇನ್ನೊಂದೆಡೆ ನಮ್ಮ ಕೇಂದ್ರ ಸರ್ಕಾರ ಸುಮಾರು 27 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ. 60 ಕೋಟಿ ರೈತರ ಖಾತೆಗೆ ನೇರ ಹಣ ಹಾಕುತ್ತಿದ್ದಾರೆ. ಇಡೀ ಜಗತ್ತೇ ಮೆಚ್ಚುವಂತಹ ನೇತೃತ್ವ ನರೇಂದ್ರ ಮೋದಿಯವರದ್ದಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಬಾಂಬ್ ಹಾಕಿದ್ದರು. ಈಗ ಕಾಶ್ಮೀರದಲ್ಲಿ ಬಾಂಬ್ ಹಾಕಿದ್ದಕ್ಕೆ ಅವರ ನೆಲೆಯನ್ನೇ ಧ್ವಂಸ ಮಾಡಿ ಬಂದಿದ್ದಾರೆ. ನಮ್ಮ ದೇಶದಲ್ಲಿ ಗಟ್ಟಿಯಾದ ನಾಯಕತ್ವ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಡಂಬಳ ಮಂಡಲದ ಅಧ್ಯಕ್ಷ ಅಂದಪ್ಪ ಹಾರೋಗೇರಿ, ನಿಕಟಪೂರ್ವ ಅಧ್ಯಕ್ಷ ರವಿ ಕರಿಗಾರ, ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪೂರ, ಮುಖಂಡರಾದ ಕರಬಸಪ್ಪ ಹಂಚಿನಾಳ, ವೆಂಕನಗೌಡ ಪಾಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

“ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆ 2026ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ. ನಾವೆಲ್ಲರೂ ಮತ್ತೊಮ್ಮೆ ಕಳಕಪ್ಪ ಬಂಡಿಯವರನ್ನು ಆಯ್ಕೆ ಮಾಡಬೇಕು. ಅದಕ್ಕಾಗಿ ಸಂಕಲ್ಪ ಮಾಡಿ ಪಣ ತೊಡೋಣ. ಭವಿಷ್ಯದಲ್ಲಿ, ರಾಜ್ಯದಲ್ಲಿ ಮತ್ತೆ ಬಿಜೆಪಿಯ ದಿನಗಳು ಬರುತ್ತವೆ”

– ಬಸವರಾಜ ಬೊಮ್ಮಾಯಿ.

ಸಂಸದರು, ಹಾವೇರಿ-ಗದಗ.


Spread the love

LEAVE A REPLY

Please enter your comment!
Please enter your name here