ಬೆಳಗಾವಿ: ಭೀಕರ ಮಳೆಯಿಂದ ತೊಂದರೆಗೆ ಸಿಲುಕಿದ ರೈತರು ರಾಜ್ಯ ಸರಕಾರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ತಲೆ ಕೆಡಿಸಿಕೊಂಡಿಲ್ಲ; ಇಲಾಖೆಯ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ; ಕಂದಾಯ, ಕೃಷಿ ಸಚಿವರು ಉತ್ತರ ಕರ್ನಾಟಕದ ಪ್ರವಾಸ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆ ಸೇರಿ ಈ ಭಾಗದ ಕಬ್ಬು ಬೆಳೆಗಾರರು ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರಕಾರವು ತನ್ನ ಮುಂದಾಳತ್ವದಲ್ಲಿ ಈಡೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಗಮನ ಸೆಳೆದರು. ರಾಜ್ಯ ಸರಕಾರವು ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ನಾವು ರೈತರ ಪರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
6 ಮಿಲಿಯ ಟನ್ ಕಬ್ಬು ಅರೆಯುತ್ತಿದ್ದು, ಮೊಲಾಸೆಸ್, ಎಥೆನಾಲ್ ಮೊದಲಾದವುಗಳಿಂದ ರಾಜ್ಯ ಸರಕಾರಕ್ಕೆ ತೆರಿಗೆ ಮೂಲಕ ಸುಮಾರು 50- 55 ಸಾವಿರ ಕೋಟಿ ಆದಾಯ ಬರುತ್ತದೆ. ರಾಜ್ಯ ಸರಕಾರದ ಕರ್ತವ್ಯವೂ ಇರುತ್ತದೆಯಲ್ಲವೇ? ಸರಕಾರವು ಸಂಕಷ್ಟದಲ್ಲಿರುವ ರೈತರ ಸಮಸ್ಯೆ ಆಲಿಸುತ್ತಿಲ್ಲ. ಈ ಕಾಂಗ್ರೆಸ್ ರೈತರು, ಕಬ್ಬು ಬೆಳೆಗಾರರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ ಎಂದರು.
ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರವು ತನ್ನ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯ ಸರಕಾರವು ತನ್ನ ಜವಾಬ್ದಾರಿಯನ್ನು ಅರಿತು ಸ್ಪಂದಿಸಿಲ್ಲ; ವಿಪಕ್ಷವಾಗಿ ನಾವು ಹೊಣೆಯರಿತು ಕೆಲಸ ಮಾಡುತ್ತಿದ್ದೇವೆ. ನಾಡಿಗೆ ಅನ್ನ ನೀಡುವ ರೈತರ ವಿಚಾರ ಬಂದಾಗ ಪಕ್ಷಾತೀತವಾಗಿ ನಾವು ರೈತರ ಪರವಾಗಿ ನಿಲ್ಲಬೇಕಾಗುತ್ತದೆ. ಹಾಗಾಗಿ ನಾನು, ನಮ್ಮ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಿ ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಇಲ್ಲಿ ಬಂದಿದ್ದೇನೆ ಎಂದು ತಿಳಿಸಿದರು.
2014ರಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗ ರೈತ ವಿಠಲ ಅರಬಾವಿ ಅವರು ಕಬ್ಬಿನ ದರದ ವಿಚಾರದಲ್ಲಿ ಪ್ರಾಣ ಕಳಕೊಂಡರು. ಯಡಿಯೂರಪ್ಪ ಅವರೂ ಬೀದಿಗಿಳಿದು ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿಗಳಿಗೆ 150 ರೂ. ಹೆಚ್ಚುವರಿ ದರಕ್ಕೆ ಒತ್ತಾಯ ಮಾಡಿದ್ದರು. ಅವರ ಹೋರಾಟ ಆಗ ಯಶಸ್ವಿ ಆಗಿತ್ತು ಎಂದು ನೆನಪಿಸಿದರು.


