ಹಾಸನ: ಮನೆಯಿಂದ ನಾಪತ್ತೆಯಾಗಿದ್ದ 67 ವರ್ಷದ ವೃದ್ಧೆಯ ಶವ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿರುವ ಘಟನೆ ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ನಡೆದಿದೆ.
ಹಿರೀಹಳ್ಳಿಕೊಪ್ಪಲು ಗ್ರಾಮದ ಲಕ್ಷ್ಮಮ್ಮ ಮೃತ ಮಹಿಳೆ. ಪತಿ ಅಣ್ಣೇಗೌಡ ಅವರೊಂದಿಗೆ ವಾಸವಾಗಿದ್ದ ಲಕ್ಷ್ಮಮ್ಮ, ಅ.3ರಂದು ವಿಜಯಕೊಪ್ಪಲಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ.
ಪತ್ನಿ ಕಾಣೆಯಾಗಿರುವ ಬಗ್ಗೆ ಅಣ್ಣೇಗೌಡ ಅ.6ರಂದು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. ಈ ವೇಳೆ ಪೊಲೀಸರು ಹುಡುಕಾಟ ನಡೆಸಿದಾಗ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಲಕ್ಷ್ಮಮ್ಮ ಅವರ ಮೃತದೇಹ ಪತ್ತೆಯಾಗಿದೆ.
ವೃದ್ಧೆ ಧರಿಸಿದ್ದ ಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳು ಕೊಲೆ ಮಾಡಿ, ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಾಲೆಗೆ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಾಸನ ಎಸ್‌ಪಿ ಶುಭನ್ವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.



