ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಕ್ಷೇತ್ರದಲ್ಲಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಟುತ್ತಾ ಸಾಗಿದ್ದು, ಯೋಜನೆ ಶೀಘ್ರವೇ ಪೂರ್ಣಗೊಂಡು ಕಾರ್ಯಾರಂಭಗೊಳ್ಳಬೇಕು ಮತ್ತು ರೈತ ಆತ್ಮಹತ್ಯೆ, ಆಕಸ್ಮಿಕ ಸಾವು-ನೋವು, ನಷ್ಟಕ್ಕೆ ತ್ವರಿತವಾಗಿ ಪರಿಹಾರ ಕೊಡಬೇಕು ಎಂದು ಸರ್ಕಾರದ ಗಮನ ಸೆಳೆದರು.
ಕ್ಷೇತ್ರದಲ್ಲಿ ತುಂಗಭದ್ರಾ ನದಿಯಿಂದ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿನ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 2017ರಲ್ಲಿಯೇ ಸಿಎಂ ಸಿದ್ಧರಾಮಯ್ಯನವರೇ ಚಾಲನೆ ನೀಡಿದ್ದರು. 8 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸಹ ಗುತ್ತಿಗೆದಾರರಿಗೆ ಶೇ. 90 ಬಿಲ್ ಸಹ ಪಾವತಿಯಾಗಿದೆ. ಈ ಬಗ್ಗೆ ಕಳೆದ ವರ್ಷವೇ ಸದನದಲ್ಲಿ ಪ್ರಶ್ನೆ ಎತ್ತಿದ್ದೇನೆ ಮತ್ತು ಕಾಮಗಾರಿ ಸ್ಥಳಕ್ಕೆ ಅನೇಕ ಬಾರಿ ಭೇಟಿ ನೀಡಿ ಪರಿಶೀಲಿಸಿ ಒತ್ತಾಯಿಸಿದ್ದೇನೆ. ಆದರೂ ಕಾಮಗಾರಿ ಪೂರ್ಣಗೊಳಿಸುವಲ್ಲಿ ಗುತ್ತಿಗೆದಾರರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಡಿಸಿಎಂ ಶಿವಕುಮಾರ ಅವರಿಗೆ ಆಗ್ರಹಿಸಿದರು.
ಗುತ್ತಿಗೆದಾರರಿಗೆ ಸೂಚಿಸುತ್ತೇನೆ ಎಂದು ಡಿಸಿಎಂ ಉತ್ತರಿಸಿದ್ದರು. ಶಾಸಕರು ಮಂಗಳವಾರ ಸದನದಲ್ಲಿ ಪ್ರಶ್ನೆ ಎತ್ತಿದ್ದರ ಫಲವಾಗಿ ಬುಧವಾರ ಲಕ್ಷ್ಮೇಶ್ವರ ಭಾಗದಲ್ಲಿ ಪೈಪ್‌ಗಳು ಸಂಗ್ರಹವಾಗಿ ಕಾಮಗಾರಿ ಪ್ರಾರಂಭಗೊಂಡಿರುವುದು ಗಮನಾರ್ಹ.
ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ, ಬಣವೆ ಸುಟ್ಟಿರುವ ಪ್ರಕರಣಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ರೈತರು ಪರಿಹಾರ ಸಿಗದೇ ಪರಿತಪಿಸುವಂತಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರದ ಗಮನಕ್ಕೆ ತಂದರು.



