ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್, ಸಿಮ್ ಕಾರ್ಡ್ ಮತ್ತು ಪೆನ್ಡ್ರೈವ್ ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಈ ವಸ್ತುಗಳನ್ನು ಪೂರೈಸಿದ ಆರೋಪದಡಿ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣದ ಆರೋಪಿಗಳನ್ನು ಎದುರುಬದುರು ಕೂರಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಜೈಲಿನ ಸೆಲ್ನಲ್ಲಿ ಮೊಬೈಲ್ ಬಳಕೆಯಾಗಿರುವ ಕುರಿತು ಸಿಸಿಬಿ ನಡೆಸಿದ ದಾಳಿಯ ವೇಳೆ ಮೊಬೈಲ್, ಸಿಮ್ ಕಾರ್ಡ್, ಪೆನ್ಡ್ರೈವ್ ಹಾಗೂ ನೋಟ್ಬುಕ್ ಪತ್ತೆಯಾಗಿದ್ದವು. ಆರಂಭದಲ್ಲಿ ಮೊಬೈಲ್ ತನ್ನದೆಂದು ಹೇಳಿದ್ದ ಪ್ರಜ್ವಲ್ ರೇವಣ್ಣ, ಬಳಿಕ ಅದು ತನ್ನದಲ್ಲ, ಜೊತೆಯಲ್ಲಿದ್ದ ಪ್ರತಾಪ್ಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಮೊಬೈಲ್ನ ಪಾಸ್ವರ್ಡ್ ನೀಡುವ ವಿಚಾರದಲ್ಲಿಯೂ ಪೊಲೀಸರಿಗೆ ಸಹಕರಿಸಿರಲಿಲ್ಲ ಎಂದು ವರದಿಯಾಗಿದೆ.
ಮೊಬೈಲ್, ಪೆನ್ಡ್ರೈವ್ ಎಫ್ಎಸ್ಎಲ್ಗೆ ರವಾನೆ:
ಪತ್ತೆಯಾದ ಮೊಬೈಲ್ ಮತ್ತು ಪೆನ್ಡ್ರೈವ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದ್ದು, ಅವುಗಳಲ್ಲಿರುವ ಮಾಹಿತಿಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಮೊಬೈಲ್ನಲ್ಲಿ ಪತ್ತೆಯಾದ ಸಂಪರ್ಕ ಸಂಖ್ಯೆಗಳು ಸೇರಿದಂತೆ ಹಲವು ವಿವರಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ಅನುಮತಿಯ ಮೇರೆಗೆ ಪ್ರಜ್ವಲ್ ರೇವಣ್ಣ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮೊಬೈಲ್ ಜೈಲಿನೊಳಗೆ ಬಂದಿದ್ದು ಹೇಗೆ?
ಜೈಲಿನೊಳಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ತಲುಪಿದ ಮಾರ್ಗದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಪೂರೈಕೆಯಲ್ಲಿ ಇಬ್ಬರು, ಸಿಮ್ ಕಾರ್ಡ್ ಒದಗಿಸುವಲ್ಲಿ ಮತ್ತಿಬ್ಬರು ಹಾಗೂ ಜೈಲು ವಾರ್ಡನ್ ಮೂಲಕ ಮೊಬೈಲ್ ತಲುಪಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪ್ರತಾಪ್ ಮತ್ತು ಎ2 ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಮೊಬೈಲ್ ಪೂರೈಕೆಯ ಆರೋಪ ಎದುರಿಸುತ್ತಿರುವ ಐವರೊಂದಿಗೆ ಮುಖಾಮುಖಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಮೊಬೈಲ್ನ ಪಾಸ್ವರ್ಡ್, ಪೆನ್ಡ್ರೈವ್ನಲ್ಲಿರುವ ಮಾಹಿತಿ, ನೋಟ್ಬುಕ್ನ ವಿವರಗಳು ಹಾಗೂ ಜೈಲಿನೊಳಗೆ ಮೊಬೈಲ್ ತಲುಪಿದ ಮಾರ್ಗದ ಕುರಿತು ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.



