ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಜೈಲಿನ ವಿಐಪಿ ಸೆಲ್‌ನಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದ ಆರೋಪ ಬೆಳಕಿಗೆ ಬಂದ ಬೆನ್ನಲ್ಲೇ ಜೈಲು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಮೂಲಗಳ ಪ್ರಕಾರ, ಪ್ರಜ್ವಲ್ ರೇವಣ್ಣ ಅವರನ್ನು ವಿಐಪಿ ಸೆಲ್‌ನಿಂದ ಸಾಮಾನ್ಯ ಕೈದಿಗಳು ಇರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಸುಮಾರು 20 ಕೈದಿಗಳಿರುವ ಬ್ಯಾರಕ್‌ಗೆ ಅವರನ್ನು ಶಿಫ್ಟ್ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎನ್ನಲಾಗಿದೆ.
ಮೊಬೈಲ್‌ನಲ್ಲಿ ಹಲವು ವಿಡಿಯೋ, ಆಡಿಯೋ ದಾಖಲೆ ಪತ್ತೆ?
ಜೈಲಿನಲ್ಲಿ ಪತ್ತೆಯಾದ ಮೊಬೈಲ್ ಫೋನ್‌ನ ಪರಿಶೀಲನೆ ವೇಳೆ ಸುಮಾರು 90 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಪ್ರಜ್ವಲ್ ರೇವಣ್ಣ ಅವರು ಪರಿಚಿತರೊಂದಿಗೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಗಳ ಆಡಿಯೋ ದಾಖಲೆಗಳೂ ಮೊಬೈಲ್‌ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.
ಜೈಲಿನಲ್ಲಿದ್ದ ಮೊಬೈಲ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬರೊಂದಿಗೆ ನಡೆಸಿದ ಸಂಭಾಷಣೆಯ ವಿವರಗಳೂ ತನಿಖಾಧಿಕಾರಿಗಳ ಗಮನಕ್ಕೆ ಬಂದಿವೆ ಎಂದು ತಿಳಿದುಬಂದಿದೆ. ಆದರೆ, ಮೊಬೈಲ್‌ನಲ್ಲಿರುವ ವಿಡಿಯೋಗಳು ಮತ್ತು ಆಡಿಯೋ ದಾಖಲೆಗಳ ಮೂಲ, ಅವುಗಳನ್ನು ಯಾವಾಗ ಹಾಗೂ ಹೇಗೆ ದಾಖಲಿಸಲಾಗಿದೆ ಎಂಬುದರ ಕುರಿತು ತನಿಖೆಯಿಂದಲೇ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.
ಜೈಲು ಕೊಠಡಿಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದ ವಿಡಿಯೋ ವೈರಲ್
ಇದರ ನಡುವೆ ಪ್ರಜ್ವಲ್ ರೇವಣ್ಣ ಅವರು ಜೈಲಿನ ಕೊಠಡಿಯೊಳಗೆ ಜೈಲು ಸಮವಸ್ತ್ರ ಧರಿಸದೇ ವೈಯಕ್ತಿಕ ಉಡುಪಿನಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೋವೊಂದು ಬಹಿರಂಗವಾಗಿದೆ.
ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಸದ್ಯಕ್ಕೆ ನಿಖರವಾಗಿ ತಿಳಿದುಬಂದಿಲ್ಲ. ಆದರೆ ವಿಡಿಯೋ ಬಹಿರಂಗವಾಗಿರುವುದು ಜೈಲು ಆಡಳಿತದಲ್ಲಿ ಭದ್ರತಾ ಲೋಪದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಿಸಿಬಿ ದಾಳಿ ವೇಳೆ ಮೊಬೈಲ್ ಪತ್ತೆ
ನಿನ್ನೆ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಕೊಠಡಿ ಮೇಲೆ ದಾಳಿ ನಡೆಸಿದ ವೇಳೆ ಒಂದು ಮೊಬೈಲ್ ಫೋನ್ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ.
ಜೈಲಿನೊಳಗೆ ಮೊಬೈಲ್ ಫೋನ್ ಹೇಗೆ ಪ್ರವೇಶಿಸಿತು? ಅದನ್ನು ಪ್ರಜ್ವಲ್ ರೇವಣ್ಣ ಅವರಿಗೆ ಯಾರು ನೀಡಿದರು? ಎಷ್ಟು ದಿನಗಳಿಂದ ಅವರು ಮೊಬೈಲ್ ಬಳಸುತ್ತಿದ್ದರು? ಮೊಬೈಲ್ ಮೂಲಕ ಯಾರೊಂದಿಗೆ ಸಂಪರ್ಕದಲ್ಲಿದ್ದರು? ಎಂಬ ಹಲವು ಪ್ರಶ್ನೆಗಳು ಇದೀಗ ತನಿಖೆಯ ವ್ಯಾಪ್ತಿಗೆ ಬಂದಿವೆ. ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಭದ್ರತಾ ವ್ಯವಸ್ಥೆ, ಸಿಬ್ಬಂದಿಯ ಕರ್ತವ್ಯ ಹಾಗೂ ಜೈಲು ನಿಯಮಗಳ ಪಾಲನೆ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ.



