ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಆದರೆ ಪ್ರಕರಣದ ಪ್ರಮುಖ ಆರೋಪಿ ಕೃಪಾ ಆಳ್ವ ಅವರಿಂದ ಮಹತ್ವದ ಸಾಕ್ಷ್ಯ ಸಂಗ್ರಹಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸ್ಟಿಂಗ್ ಆಪರೇಷನ್ಗೆ ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್ ನೀಡಲು ಕೃಪಾ ಆಳ್ವ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪೊಲೀಸರು ಕೃಪಾ ಆಳ್ವ ಅವರನ್ನು ಮೂರು ಬಾರಿ ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆ ವೇಳೆ ನಿರೀಕ್ಷಿತ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ ವಿಡಿಯೋ ಚಿತ್ರೀಕರಣಕ್ಕೆ ಬಳಸಿದ ಮೂಲ ಮೊಬೈಲ್ ಹಾಗೂ ಸದ್ಯ ಅವರು ಬಳಸುತ್ತಿರುವ ಮೊಬೈಲ್ ಫೋನ್ಗಳನ್ನು ತನಿಖೆಗೆ ಒಪ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ವಿಡಿಯೋದ ಅಸಲಿಯತ್ತನ್ನು ಪರಿಶೀಲಿಸುವುದರ ಜೊತೆಗೆ ಅಳಿಸಿಹಾಕಿರುವ ದತ್ತಾಂಶಗಳಿದ್ದರೆ ಅವುಗಳನ್ನು ಮರುಪಡೆಯುವುದು ತನಿಖೆಯ ಉದ್ದೇಶವಾಗಿದೆ.
ಆದರೆ, ಮೊಬೈಲ್ ನೀಡಲು ಹಿಂದೇಟು ಹಾಕುತ್ತಿರುವ ಕೃಪಾ ಆಳ್ವ, ಬುಧವಾರ ಫೋನ್ ತಂದು ಕೊಡುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.









