ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಅಕ್ರಮವಾಗಿ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುತ್ತಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಕಾರವಾರ ಜಿಲ್ಲಾ ಜೈಲಿನಲ್ಲಿ ಪ್ರಭಾರ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ನಡೆಸಿದ ತಪಾಸಣೆಯ ವೇಳೆ ಕೈದಿಗಳ ಬಳಿ 7 ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ಇತ್ತೀಚೆಗೆ ಜೈಲಿನಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಗಲಾಟೆ ನಡೆದಿತ್ತು. ಮಾದಕ ಪದಾರ್ಥಗಳನ್ನು ನೀಡದ ಹಿನ್ನೆಲೆಯಲ್ಲಿ ಕೈದಿಗಳು ಗಲಾಟೆ ನಡೆಸಿದ್ದು, ಈ ವೇಳೆ ಜೈಲರ್ ಹಾಗೂ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜೈಲಿನ ಕಂಪ್ಯೂಟರ್ ಹಾಗೂ ಟಿವಿಗಳನ್ನು ಒಡೆದು ಹಾನಿ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಬ್ಯಾರಕ್‌ಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಜೈಲರ್ ದೂರು ದಾಖಲಿಸಿದ್ದಾರೆ.
ಇನ್ನೊಂದೆಡೆ, ಜೈಲಿನಲ್ಲಿದ್ದ ಗಲಾಟೆಗೆ ಕಾರಣವಾಗಿದ್ದ ಮಂಗಳೂರು ಮೂಲದ ನಾಲ್ವರು ಕೈದಿಗಳನ್ನು ರಾಜ್ಯದ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಎರಡು ತಿಂಗಳ ಹಿಂದೆ ಮಂಗಳೂರು ಜೈಲಿನಿಂದ ಈ ನಾಲ್ವರನ್ನು ಕಾರವಾರ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಅವರೇ ಇತ್ತೀಚಿನ ಗಲಾಟೆಗಳಿಗೆ ಕಾರಣರಾಗಿದ್ದರು ಎನ್ನಲಾಗಿದೆ. ಸದ್ಯ ಈ ನಾಲ್ವರು ಕೈದಿಗಳನ್ನು ಬಳ್ಳಾರಿ ಮತ್ತು ಬೆಳಗಾವಿ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.



