ಪಾಟ್ನಾ:– ಪಾಟ್ನಾದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಜಾಫರ್‌ಪುರದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ಜಂಟಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮತಗಳಿಗಾಗಿ ಮೋದಿ ಅವರು ಏನು ಬೇಕಾದರೂ ಮಾಡುತ್ತಾರೆ. ಮತ ಕೇಳಿದರೆ ನೃತ್ಯಕ್ಕೂ ಸಿದ್ಧರಾಗುತ್ತಾರೆ” ಎಂದು ವ್ಯಂಗ್ಯವಾಡಿದರು.
ದೆಹಲಿಯ ಯಮುನಾ ನದಿಯಲ್ಲಿ ಜನರು ಕಲುಷಿತ ನೀರಿನಲ್ಲಿ ಛತ್ ಪೂಜೆಯನ್ನು ಆಚರಿಸುತ್ತಾರೆ, ಆದರೆ ಮೋದಿ ಮಾತ್ರ ತಮ್ಮ ಸ್ವಿಮ್ಮಿಂಗ್ ಪೂಲ್‌ನಲ್ಲಿ ಪೂಜೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ನಿತೀಶ್ ಕುಮಾರ್‌ರ ವಿರುದ್ಧವೂ ಗರಂ ಆಗಿ ಮಾತನಾಡಿದ ರಾಹುಲ್,
“ಬಿಜೆಪಿ ನಿತೀಶ್‌ರನ್ನು ಮತಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಅವರ ರಿಮೋಟ್ ಕಂಟ್ರೋಲ್ ಈಗ ಬಿಜೆಪಿ ಕೈಯಲ್ಲಿದೆ” ಎಂದು ಟೀಕಿಸಿದರು. ಬಿಹಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್ ಹಾಗೂ ಮಹಾಮೈತ್ರಿಕೂಟ ಬದ್ಧವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


