ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.
ಶ್ರೀಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರ ಸಕಲ ಸಿದ್ಧತೆಯೊಂದಿಗೆ ಕಂಗೊಳಿಸುತ್ತಿದ್ದು, ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಭೈರವೈಕ್ಯ ಮಂದಿರ ವಿಶೇಷ ಆಕರ್ಷಣೆಯಾಗಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭದ್ರತೆಯ ದೃಷ್ಟಿಯಿಂದ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಧಾನಿ ಮೋದಿಯವರಿಗಾಗಿ ವಿಶೇಷ ‘ಮೈಸೂರು ಪೇಟ’ ಸಿದ್ಧಪಡಿಸಲಾಗಿದ್ದು, ಮೈಸೂರಿನ ಕಲಾವಿದ ನಂದನ್ ಸಿಂಗ್ ಐದು ದಿನಗಳ ಶ್ರಮದಿಂದ ಇದನ್ನು ತಯಾರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಮಾದರಿಯ ಪೇಟವು ಬನಾರಸ್ ಬಟ್ಟೆ ಹಾಗೂ ಗಂಡಭೇರುಂಡ ವಿನ್ಯಾಸವನ್ನು ಒಳಗೊಂಡಿದೆ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ‘ನಮ್ಮೂರು ನಮ್ಮೋರು’ ಸಂಸ್ಥೆಯಿಂದ ಈ ಗೌರವ ಅರ್ಪಿಸಲಾಗುತ್ತಿದೆ.
ಪ್ರಧಾನಿ ಮೋದಿ ದಿನಚರಿ:
- ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
- ಬೆಳಿಗ್ಗೆ 10:50ಕ್ಕೆ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ಪ್ರಯಾಣ
- ಬೆಳಿಗ್ಗೆ 11ಕ್ಕೆ ಮಠಕ್ಕೆ ಭೇಟಿ ನೀಡಿ ಭೈರವೈಕ್ಯ ಮಂದಿರ ಉದ್ಘಾಟನೆ
- ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ
- ಕಾರ್ಯಕ್ರಮದ ಬಳಿಕ ಬೆಂಗಳೂರಿಗೆ ಮರಳಿ ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳುವುದು.



