ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ವೇಳೆ ತೆಗೆದ ಒಂದು ಫೋಟೋ ವೈರಲ್ ಆಗಿ ದೇಶಾದ್ಯಂತ ಪರಿಚಿತರಾದ ಯುವತಿ ಮೊನಾಲಿಸಾ ಭೋಸ್ಲೆ ಇದೀಗ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮ್ಮ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ ಪ್ರಸ್ತುತ ಸಿನಿಮಾ ಚಿತ್ರೀಕರಣದ ನಿಮಿತ್ತ ಕೇರಳಕ್ಕೆ ಬಂದಿದ್ದರು. ಈ ವೇಳೆ ತಿರುವನಂತಪುರದ ಥಂಪನೂರು ಪೊಲೀಸ್ ಠಾಣೆಗೆ ತಮ್ಮ ಬಾಯ್‌ಫ್ರೆಂಡ್ ಜೊತೆ ಭೇಟಿ ನೀಡಿದ ಅವರು, ಪೋಷಕರು ತಮ್ಮ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದು ಬಲವಂತದ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೊನಾಲಿಸಾ ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಅವರನ್ನು ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದು, ಅವರೊಡನೆ ವಿವಾಹವಾಗಲು ನಿರ್ಧರಿಸಿದ್ದಾರೆ. ಆದರೆ ಈ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಸ್ಲೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ಯಾವುದೇ ದೈಹಿಕ ಹಿಂಸೆ ನಡೆದಿಲ್ಲವಾದರೂ ಮಾನಸಿಕ ಒತ್ತಡ ಹೆಚ್ಚಾಗಿರುವುದರಿಂದ ರಕ್ಷಣೆ ನೀಡುವಂತೆ ಅವರು ಪೊಲೀಸರನ್ನು ಕೋರಿದ್ದಾರೆ.
ಮೊನಾಲಿಸಾ ಅವರ ದೂರನ್ನು ಸ್ವೀಕರಿಸಿರುವ ಪೊಲೀಸರು, ಆಕೆ ವಯಸ್ಕಳಾಗಿರುವುದರಿಂದ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವಳಿಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಆಕೆಯ ತಂದೆಯನ್ನು ಕರೆಸಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರೇಮಿಗಳಿಗೆ ಕೇರಳದ ಕೆಲವು ಸ್ಥಳೀಯ ರಾಜಕೀಯ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿರುವುದಾಗಿ ಹೇಳಲಾಗಿದೆ.
ಕುಂಭಮೇಳದಲ್ಲಿ ವೈರಲ್ ಆದ ನಂತರ ಮೊನಾಲಿಸಾ ಭೋಸ್ಲೆಗೆ ಹಲವು ಸಿನಿಮಾಗಳ ಅವಕಾಶಗಳು ದೊರೆತಿವೆ. ಸದ್ಯ ಅವರು ‘ನಾಗಮ್ಮ’ ಎಂಬ ಮಲಯಾಳಂ ಚಿತ್ರ ಹಾಗೂ ‘ಲೈಫ್’ ಎಂಬ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.



