ನವದೆಹಲಿ:- ಆಪ್ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಇಂದು ಇಡಿ ದಾಳಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಕೇಸ್ ಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಸೌರಭ್ ಭಾರದ್ವಾಜ್ ಅವರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಜಿಎನ್‌ಸಿಟಿಡಿ ಆರೋಗ್ಯ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸೌರಭ್ ಭಾರದ್ವಾಜ್ ಭಾಗಿಯಾಗಿದ್ದಾರೆ ಎಂದು ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆರೋಪಿಸಿದ್ದರು. ಈ ಸಂಬಂಧ ಮಂಗಳವಾರ ಇಡಿ ಅಧಿಕಾರಿಗಳು ಸೌರಭ್ ಭಾರದ್ವಾಜ್ ಅವರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ.
2018-2019ರಲ್ಲಿ, ಆಪ್ ನೇತೃತ್ವದ ದೆಹಲಿ ಸರ್ಕಾರವು 24 ಆಸ್ಪತ್ರೆಗಳ ನಿರ್ಮಾಣಕ್ಕಾಗಿ 5,590 ಕೋಟಿ ರೂ. ಹಣದ ಯೋಜನೆಗಳನ್ನು ಅನುಮೋದಿಸಿತ್ತು. ಐಸಿಯು ಆಸ್ಪತ್ರೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ಮೂರು ವರ್ಷಗಳ ನಂತರವೂ ಕೆಲಸ ಅಪೂರ್ಣವಾಗಿಯೇ ಇತ್ತು.
800 ಕೋಟಿ ರೂ. ಹಣ ಖರ್ಚು ಮಾಡಿದರೂ, 50% ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್ ದಾಖಲಿಸಿತ್ತು. ದಾಳಿ ವೇಳೆ ವಶಪಡಿಸಿಕೊಂಡ ಆಸ್ತಿಗಳ ವಿವರ ಮತ್ತು ಪತ್ತೆಯಾದ ಆರ್ಥಿಕ ಅಕ್ರಮಗಳ ವಿವರಗಳನ್ನು ಕೇಂದ್ರ ತನಿಖಾ ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.