ವಿಜಯಸಾಕ್ಷಿ ಸುದ್ದಿ, ಹರಿಹರ : ಬದುಕು ಭಗವಂತ ಕೊಟ್ಟ ಅಮೂಲ್ಯವಾದ ಸಂಪತ್ತು. ಸತ್ಯ, ಶಾಂತಿ, ಸಾಮರಸ್ಯ, ಸದ್ಭಾವನೆಗಳನ್ನು ಹೊಂದಿ ಬಾಳಬೇಕು. ಭೌತಿಕ ಜೀವನ ಸಮೃದ್ಧಗೊಂಡರೆ ಸಾಲದು, ಅದರೊಂದಿಗೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನ ದೈಹಿಕ ಬೆಳವಣಿಗೆಗೆ ಆಹಾರ ನೀರು ಮುಖ್ಯವಾಗಿರುವಂತೆ ಬದುಕಿನ ವಿಕಾಸಕ್ಕೆ ಮತ್ತು ಅಭಿವೃದ್ಧಿಗೆ ಧರ್ಮಾಚರಣೆ ಅಗತ್ಯವಾಗಿದೆ. ವ್ಯಕ್ತಿ ಜೀವನದಲ್ಲಿ ಸಂಪತ್ತು ಗಳಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಂಡು ಬಾಳಬೇಕು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ವೀರಶೈವ ಧರ್ಮದಲ್ಲಿ ಜ್ಞಾನ ಕ್ರಿಯೆ ಮತ್ತು ಸಾಮಾಜಿಕ ಚಿಂತನೆಗಳಿಗೆ ಆದ್ಯತೆ ಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ತತ್ವ ಸಿದ್ಧಾಂತದ ಚಿಂತನಗಳು ಜೀವಾತ್ಮ ಪರಮಾತ್ಮನಾಗಲು ಬೇಕಾದ ಸಾಧನಾ ಮಾರ್ಗದ ಅರಿವನ್ನು ಉಂಟು ಮಾಡುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ವೀರಶೈವ ಧರ್ಮದ ಮೂಲ ಪೀಠಗಳು ಪಂಚ ಪೀಠಗಳು. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರು ಪೂಜಾ ವೈಭವ ಕಂಡವರು ನಾವು. ಶ್ರೀ ರಂಭಾಪುರಿ ಜಗದ್ಗುರುಗಳ ಪೂಜಾ ಸಂದರ್ಭದಲ್ಲಿ ಕೈಲಾಸದಲ್ಲಿದ್ದ ಅನುಭವ ಆಗುತ್ತಿದೆ. ಸಮಾಜ ಮತ್ತು ಸಂಸ್ಕೃತಿ ಕಟ್ಟಿ ಬೆಳೆಸುವಲ್ಲಿ ಬಹಳ ಶ್ರಮ ವಹಿಸಿ ಧರ್ಮ ಜಾಗೃತಿ ಮಾಡುತ್ತಿದ್ದಾರೆ ಎಂದರು.
ಅವಧೂತ ಕವಿ ಗುರುರಾಜ ಗುರೂಜಿ ಮಾತನಾಡಿ, ಸಂಪತ್ತು ಬೆಳೆದಂತೆ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಮನುಷ್ಯನಲ್ಲಿ ಮಾನವೀಯತೆ ಕರುಣೆ ಮತ್ತು ಪರೋಪಕಾರ ಮನೋಭಾವನೆಗಳು ಬೆಳೆಯಬೇಕು. ಬದುಕಿನ ಶ್ರೇಯಸ್ಸಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಒಂದಿಷ್ಟಾದರೂ ಶಿವಜ್ಞಾನದ ಅರಿವು ಮುಖ್ಯವೆಂದರು.
ಮುಖ್ಯ ಅತಿಥಿಗಳಾಗಿ ಹರಿಹರದ ಅ.ಭಾ.ವೀ.ಮ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ನಗರಸಭೆ ಮಾಜಿ ಸದಸ್ಯ ಡಿ. ಹೇಮಂತರಾಜ್, ಜವಳಿ ಸಮಾಜದ ಅಧ್ಯಕ್ಷ ಕೊಂಡಜ್ಜಿ ಈಶ್ವರಪ್ಪ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಗಿರೀಶ ಹೆಗ್ಗಪ್ಪನವರ, ಮಲ್ಲಪ್ಪ ಹೆಗ್ಗಪ್ಪನವರ, ಅಣ್ಣಪ್ಪ ಪೂಜಾರ, ನಾಗರಾಜ ಚಕ್ರಸಾಲಿ, ಹೆಚ್.ಎಂ. ಶಿವಕುಮಾರಸ್ವಾಮಿ. ಟಿ.ಜೆ. ಮುರುಗೇಶಪ್ಪನವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಸೃಷ್ಟಿ ಅವರಿಂದ ಯೋಗ ಪ್ರದರ್ಶನ ಜರುಗಿತು. ಐಶ್ವರ್ಯ ಸ್ವಾಗತಿಸಿದರು. ಶಿಕ್ಷಕ ವಿ.ಬಿ. ಕೊಟ್ರೇಶ ನಿರೂಪಿಸಿದರು. ಕಾಂತರಾಜ ಮತ್ತು ವೀರೇಶ್ ಸಂಗಡಿಗರಿಂದ ಭಕ್ತಿ ಗೀತೆ ಜರುಗಿತು. ಹೆಚ್.ಎಂ. ಸೋಮನಾಥಯ್ಯ ಸಹೋದರರು ಪ್ರಸಾದ ಸೇವೆ ಸಲ್ಲಿಸಿದರು.
ನೇತೃತ್ವ ವಹಿಸಿದ ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಬೆಳಕು ಮೂಡಿಸಬೇಕೇ ವಿನಃ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಸಮಾಜದಲ್ಲಿ ಸಂಘಟನೆಗಳು ನಡೆಯಬೇಕಲ್ಲದೆ ಸಂಘರ್ಷಗಳು ನಡೆಯಬಾರದು. ಅಧರ್ಮದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯಲಾರವು ಎಂದರು.