ಚಿಕ್ಕೋಡಿ: ಸಂಕೇಶ್ವರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಾಯಿ ಮತ್ತು ಮಗ ಹಿರಣ್ಯಕೇಶಿ ನದಿಗೆ ಬಿದ್ದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕನ ಶವ ಪತ್ತೆಯಾಗಿದೆ.
ಸಂಕೇಶ್ವರದ ಹನುಮಾನ ನಗರ ನಿವಾಸಿ ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಅವರ ಮಗ ಸುಪ್ರೀತ ಸುಧಾಕರ ಕುಟೋಳಿ (9) ಕಳೆದ ನಾಲ್ಕು ದಿನಗಳ ಹಿಂದೆ ಶಂಕರಲಿಂಗ ಮಠದ ಹಿಂಭಾಗದ ಹಿರಣ್ಯಕೇಶಿ ನದಿಯಲ್ಲಿ ನೀರಿಗೆ ಬಿದ್ದಿದ್ದರು ಎಂದು ತಿಳಿದುಬಂದಿದೆ. ಘಟನೆಯ ದಿನವೇ ತಾಯಿಯ ಶವವನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಿಂದ ಹೊರತೆಗೆದಿದ್ದರು.
ಮಗನಿಗಾಗಿ ಕಳೆದ ನಾಲ್ಕು ದಿನಗಳಿಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ನಿರಂತರ ಶೋಧ ಕಾರ್ಯ ನಡೆಸುತ್ತಿದ್ದವು. ಇದೀಗ ಬಾಲಕನ ಶವವು ಘಟನೆ ನಡೆದ ಸ್ಥಳದಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿ ನದಿಯಲ್ಲಿ ತೇಲಿ ಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತ್ತೆಯಾದ ಶವವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಪ್ರದೇಶದಲ್ಲಿ ದುಃಖದ ವಾತಾವರಣವನ್ನು ಸೃಷ್ಟಿಸಿದೆ.



