ಬೆಂಗಳೂರು: ಗಂಡನ ಜೊತೆ ಜಗಳವಾಡಿಕೊಂಡು ತಾಯಿ ಮನೆ ಸೇರುತ್ತಿದ್ದ ಕಾರಣಕ್ಕೆ ತಾಯಿಯೊಬ್ಬಳು ಮಚ್ಚು ಬೀಸಿದ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್ ಹರಿಹರೇಶ್ವರ ದೇವಸ್ಥಾನದ ಬಳಿ ನಡೆದಿದೆ. ರಮ್ಯಾ (22) ಹಲ್ಲೆಗೊಳಗಾದ ಮಗಳಾಗಿದ್ದು, ಸರೋಜಮ್ಮ ಮಚ್ಚಿನಿಂದ ಮಗಳ ಕುತ್ತಿಗೆಯನ್ನೇ ಕೊಚ್ಚಿರುವ ತಾಯಿಯಾಗಿದ್ದಾಳೆ. ಸದ್ಯ ಗಾಯಾಳು ರಮ್ಯಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ
ಪದೇ ಪದೇ ರಮ್ಯಾ ತನ್ನ ಗಂಡನ ಜೊತೆ ಜಗಳವಾಡಿಕೊಂಡು ತಾಯಿ ಮನೆ ಸೇರುತ್ತಿದ್ದಳಂತೆ. ಇದೇ ವಿಚಾರ ಇವತ್ತು ಬೆಳಗ್ಗೆ ತಾಯಿ ಹಾಗೂ ಮಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳ ಅತಿರೇಕಕ್ಕೆ ತಿರುಗಿದೆ. ಕೋಪಗೊಂಡ ತಾಯಿ ಸರೋಜಮ್ಮ ಮಚ್ಚಿಂದ ಮಗಳ ಕುತ್ತಿಗೆಯನ್ನೇ ಇರಿದಿದ್ದಾರೆ ಎನ್ನಲಾಗ್ತಿದೆ.
ಬೆಳಗಿನ ಜಾವ ನಾಲ್ಕು ಗಂಟೆಗೆ ಪೂಜೆಗೆ ಅಂತಾ ಕರೆದುಕೊಂಡು ಬಂದಿದ್ದ ತಾಯಿ, ಬೆಳಗ್ಗೆ ಪೂಜೆ ಮಾಡುವಾಗ ತಲೆಬಾಗಿ ನಮಸ್ಕರಿಸ್ತಿದ್ದವೇಳೆ ಮಚ್ಚಿನಿಂದ ಮಗಳ ಕುತ್ತಿಗೆ ಕತ್ತರಿಸಿದ್ದಾಳೆ. ನಂತರ ಘಟನೆ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಸದ್ಯ ಘಟನೆ ಸ್ಥಳದಲ್ಲಿ ಪೊಲೀಸ್ರಿಂದ ಪರಿಶೀಲನೆ ನಡೆಸಿದ್ದು, ಸಂಪಿಗೆಹಳ್ಳಿ ಪೊಲೀಸರಿಂದ ಆರೋಪಿತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


