ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯ ಜ.ಫ. ಸಿದ್ದರಾಮ ಶ್ರೀಗಳೊಂದಿಗೆ ಹಳೆಯ ಮತ್ತು ಅವಿನಾಭಾವ ಸಂಬಂಧವಿದ್ದು, ನನ್ನ ಮೊದಲನೇ ಚುನಾವಣೆಯಿಂದ ಇಲ್ಲಿಯವರೆಗೂ ಅವರ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಅವರು ಶನಿವಾರ ಶಿರಹಟ್ಟಿಯ ಶ್ರೀ ಜ.ಫಕೀರೇಶ್ವರ ಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆಯ ದರ್ಶನ ಪಡೆದು ನಂತರ ಜ.ಫ.ಸಿದ್ದರಾಮ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೊದಲನೇ ಚುನಾವಣೆಯಲ್ಲಿ ನನಗೆ ಅನೇಕ ಸವಾಲುಗಳಿದ್ದವು. ಇದರಿಂದ ಕೊಂಚ ಭಯದಲ್ಲಿದ್ದ ನನಗೆ ಅದರಗುಂಜಿಯಲ್ಲಿ ಜ.ಫ.ಸಿದ್ದರಾಮ ಶ್ರೀಗಳು ಕರೆದು, ಚುನಾವಣೆಯಲ್ಲಿ ನೀನೆ ಗೆಲ್ಲುತ್ತಿ, ಭಯ ಪಡಬೇಡ ಎಂದು ಹೇಳಿದ್ದರು. ಅದರಂತೆ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅವರಿಗೆ ಮತ್ತು ಶ್ರೀ ಪೀಠಕ್ಕೆ ನಾನು ಸದಾ ಚಿರರುಣಿಯಾಗಿರುತ್ತೇನೆ ಎಂದರು.
ಜ.ಫ.ಸಿದ್ದರಾಮ ಶ್ರೀಗಳು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿರುವ ಪ್ರಹ್ಲಾದ ಜೋಶಿಯವರಿಂದ ಇನ್ನೂ ಹೆಚ್ಚಿನ ಸತ್ಕಾರ್ಯಗಳು ನಡೆಯಲಿ. ಶ್ರೀ ಪೀಠದಲ್ಲಿ ಅವರಿಂದ ಅಜರಾಮರವಾಗಿ ಉಳಿಯುವಂತಹ ಕೆಲಸ ಆಗಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಡಾ. ಚಂದ್ರು ಲಮಾಣಿ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ರವಿ ಛಬ್ಬಿ, ಸಿ.ಸಿ. ನೂರಶೆಟ್ಟರ, ರಾಜು ಕುರಡಗಿ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ಶಂಕರ ಮರಾಠೆ, ಕೆ.ಎ.ಬಳಿಗೇರ, ರವಿ ದಂಡಿನ, ಶರಣು ಅಂಗಡಿ, ಮುತ್ತು ಮಜ್ಜಗಿ, ಅಶೋಕ ವರವಿ, ಗೂಳಪ್ಪ ಕರಿಗಾರ ಮುಂತಾದವರು ಉಪಸ್ಥಿತರಿದ್ದರು.