ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗದಗ, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಪಂಚಾಯತ ಗದಗ/ತಾಲೂಕ ಪಂಚಾಯತ ಲಕ್ಷೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಇವರ ಸಹಯೋಗದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಸಾಮಾಜಿಕ ಪರಿಶೋಧನಾ ಪ್ರಯುಕ್ತ ಶಾಲಾ ಸಭೆ/ಪೋಷಕರ ಸಭೆಯನ್ನು ಶನಿವಾರ ಸಮೀಪದ ಹರದಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯ ವ್ಯವಸ್ಥಾಪಕ ಎಂ. ಮರಿಬಸನಗೌಡರ ಮಾತನಾಡಿ, ಶಾಲೆಯ ಅಭಿವೃದ್ಧಿಗಾಗಿ ಶಾಲಾ ಅಭಿವೃದ್ಧಿ ಸಮಿತಿ ಸೇರಿದಂತೆ ಪಾಲಕರು, ಶಿಕ್ಷಕರು ಶ್ರಮಿಸಿದಾಗ ಮಾತ್ರ ಶಾಲೆಯು ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಇರುವ ಸಮಸ್ಯೆಗಳ ನಿವಾರಣೆಗೆ ಸಕ್ರಿಯವಾಗಿ ಪಾಲ್ಗೊಂಡು ಆಯಾ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿ ಬಗ್ಗೆ ಜನರ ಅಭಿಪ್ರಾಯ ಪಡೆದು, ಶಾಲೆಯ ಅಭಿವೃದ್ಧಿಯ ಲೆಕ್ಕ ಪರಿಶೋಧನೆ ನಡೆಸಲಾಗಿದೆ. ಹಲವಾರು ರೀತಿಯಲ್ಲಿ ಶಾಲಾ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಶಾಲೆಯಲ್ಲಿ ಶೌಚಾಲಯಯದ ಕೊರತೆ, ಮತ್ತು ಶಿಕ್ಷಕರ ಕೊರತೆಯ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದರು.
ಸಿ.ಎಸ್. ನೇಕಾರ ಸ್ವಾಗತಿಸಿದರು. ಎಸ್.ಆರ್. ನದಾಫ್ ನಿರೂಪಿಸಿದರು. ಪಿ.ವಾಯ್. ಮ್ಯಾಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಎನ್.ಎನ್. ಶಿಗ್ಲಿ, ವಿ.ಪಿ. ಸುಗ್ನಳ್ಳಿ, ಅರುಣ ಬೇತುರವ್ಮಠ, ಪರಿಶೋಧನಾ ಸಿಬ್ಬಂದಿ ಶಂಕ್ರಪ್ಪ ಯತ್ತಿನಹಳ್ಳಿ, ನಿರ್ಮಲಾ ಕಬಾಡೆ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ರವಿ ಲಮಾಣಿ, ಮಂಗೇಶ ಲಮಾಣಿ ಮತ್ತು ಊರಿನ ಹಿರಿಯರಾದ ಯಂಕಪ್ಪ ಲಮಾಣಿ, ನಾಗೇಶ ಕಾರಭಾರಿ, ಸುರೇಶ ಲಮಾಣಿ ಮತ್ತಿತರಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ರವಿ ಟಿ.ಲಮಾಣಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಎಲ್.ಎನ್. ನಂದೆಣ್ಣವರ್ ಮಾತನಾಡಿ, ಶಾಲೆಯ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ಕಾಮಗಾರಿ ನಡೆಯುತ್ತಿದೆ ಮತ್ತು ಕೊರತೆ ಇರುವ ಕಾಮಗಾರಿಗಾಗಿ ಆದ್ಯತೆ ನೀಡಲಾಗುವದು ಎಂದರು.