ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತ್ಯಾಗ, ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಬುಧವಾರ ಪಟ್ಟಣ ಸೇರಿ ತಾಲೂಕಿನಾದ್ಯಂತ ಹಿಂದೂ-ಮುಸ್ಲಿಂ ಬಾಂಧವರು ಸಂಪ್ರದಾಯಬದ್ಧವಾಗಿ ಆಚರಿಸಿದರು.
ತಾಲೂಕಿನಾದ್ಯಂತ ಪ್ರತಿಷ್ಠಾಪನೆ ಮಾಡಲಾಗಿದ್ದ ಪಂಜಾಗಳ ಮೆರವಣಿಗೆ ಹೆಜ್ಜೆ ಮೇಳದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಹತ್ತಿರ ಪಟ್ಟಣದ ಸುಮಾರು 15 ಮಸೀದಿಗಳ ಪಂಜಾಗಳು ಸೇರಿ ಅಲ್ಲಿಂದ ಮೆರವಣಿಗೆಯ ಬಜಾರ್ ರಸ್ತೆಯ ಮೂಲಕ ಸಾಗಿ ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂದೆ ಹಾಯ್ದು ಶಿಗ್ಲಿ ಕ್ರಾಸವರೆಗೆ ಸಾಗಿ ಚೋಟೆ ಲಂಕಾಪತಿ ಮಸೀದಿಗೆ ಭೇಟಿ ನೀಡಿ ಮತ್ತೆ ತಮ್ಮ ತಮ್ಮ ಮೂಲ ಸ್ಥಳಗಳಿಗೆ ಮೆರವಣಿಗೆಯ ಮೂಲಕ ಸಾಗುವುದು ವಾಡಿಕೆಯಾಗಿದ್ದು, ಸಂಜೆ ಮತ್ತೆ ಎಲ್ಲ ಪಂಜಾಗಳು ಸೇರಿ ಹೊಳೆಗೆ ಹೋಗುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ.
ಮೆರವಣಿಗೆಯುದ್ದಕ್ಕೂ ಆಲಾವಿ ಹಾಡು ಹೇಳುತ್ತ ಯುವಕರನ್ನು ರಂಜಿಸುವ ಕಾರ್ಯ ಆಲಾವಿ ಮೇಳದಿಂದ ನಡೆದಿತ್ತು. ಹಿಂದೂ-ಮುಸ್ಲಿಂ ಯುವಕರು ಹೆಜ್ಜೆ ಮೇಳ ಕಟ್ಟಿಕೊಂಡು ಕುಣಿಯುತ್ತ ಬೀಬಿ ಪಾತೀಮಾ ಹಾಗೂ ಮಹ್ಮದರ ಸಾಹಸ ಮತ್ತು ಯುದ್ಧದ ವರ್ಣನೆ ಆಲಾವಿ ಹಾಡುಗಳು ಕೇಳುಗರಲ್ಲಿ ರೋಮಾಂಚನ ಉಂಟು ಮಾಡುವಂತಿದ್ದವು. ಹಿಂದೂ ಮತ್ತು ಮುಸ್ಲಿಂ ಬಾಂಧವರು ಎನ್ನುವ ಬೇಧವಿಲ್ಲದೆ ಆಲಾವಿ ದೇವರುಗಳಿಗೆ ಸಕ್ಕರೆ ಓದಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೆರವಣಿಗೆಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ಉಪಾಧ್ಯಕ್ಷ ಅಬ್ದುಲ್‌ಕರೀಮ್ ಸೂರಣಗಿ, ಝಾಕೀರಹುಸೇನ್ ಹವಾಲ್ದಾರ, ದಾದಾಪೀರ ಮುಚ್ಚಾಲೆ, ದಾದಾಪೀರ ತಂಬಾಕದ, ಎನ್.ಎಂ. ಗದಗ, ಬಾಷಾ ಶಿರಹಟ್ಟಿ, ಅಬ್ಬು ಕಾರಡಗಿ, ಅಣ್ಣಪ್ಪ ಸಂಶಿ ಸೇರಿದಂತೆ ಹಿಂದೂ-ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಪಿಎಸ್‌ಐ ಈರಪ್ಪ ರಿತ್ತಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಪಟ್ಟಣದಲ್ಲಿನ ಮಸೀದಿ, 15ಕ್ಕೂ ಹೆಚ್ಚು ಮೊಹಲ್ಲಾಗಳಲ್ಲಿ ಸ್ಥಾಪಿಸಲಾಗಿದ್ದ ಅಲೈ ದೇವರು ಮತ್ತು ಡೋಲಿ ಹಾಗೂ ಹಸೇನ, ಹುಸೇನ ಮತ್ತು ಬೀಬಿ ಪಾತೀಮಾ ಪ್ರತೀಕವಾದ ಪಂಜಾಗಳ (ದೇವರು) ಭವ್ಯವಾದ ಮೆರವಣಿಗೆ ನಡೆಸಲಾಯಿತು. ನಂತರ ಅಗೀನ ಹಾಯುವುದು, ಶಸ್ತç ಸೇವೆ, ಬಾರಕೋಲು ಸೇವೆಯ ಮೂಲಕ ಭಕ್ತಿ ಪ್ರದರ್ಶಿಸಲಾಯಿತು. ಮುಸ್ಲಿಂರೇ ಇಲ್ಲದ ತಾಲೂಕಿನ ಒಡೆಯರ ಮಲ್ಲಾಪುರದಲ್ಲಿ ಹಿಂದೂಗಳೇ ಮೊಹರಂ ಹಬ್ಬ ಆಚರಿಸಿದರು.