HomeKarnataka Newsಮೂಕ ಜೀವಿಗಳಿಗೂ ನ್ಯಾಯ ಬೇಕು: 9 ನಾಯಿಗಳನ್ನು ಪೇಟಾ ವಶದಲ್ಲೇ ಇರಿಸಲು ಆದೇಶಿಸಿದ ಹೈಕೋರ್ಟ್

ಮೂಕ ಜೀವಿಗಳಿಗೂ ನ್ಯಾಯ ಬೇಕು: 9 ನಾಯಿಗಳನ್ನು ಪೇಟಾ ವಶದಲ್ಲೇ ಇರಿಸಲು ಆದೇಶಿಸಿದ ಹೈಕೋರ್ಟ್

For Dai;y Updates Join Our whatsapp Group

Spread the love

ಬೆಂಗಳೂರು: ಪ್ರಾಣಿಗಳಿಗೆ ಮಾತು ಬಾರದಿದ್ದರೂ ಅವು ನೋವು, ಯಾತನೆ ಮತ್ತು ಭಾವನೆಗಳನ್ನು ಅನುಭವಿಸುತ್ತವೆ. ಆದ್ದರಿಂದ ಅವುಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ನಾಯಿಗಳಿಗೆ ಹಿಂಸೆ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಅವುಗಳ ಕಸ್ಟಡಿ ನೀಡಲು ನಿರಾಕರಿಸಿರುವ ನ್ಯಾಯಾಲಯ, ಒಂಬತ್ತು ನಾಯಿಗಳನ್ನು ಪ್ರಾಣಿ ದಯಾ ಸಂಸ್ಥೆಯ ವಶದಲ್ಲೇ ಇರಿಸಲು ಆದೇಶಿಸಿದೆ.

ನಾಯಿಗಳನ್ನು ಮಾಲೀಕನಿಗೆ ಹಸ್ತಾಂತರಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಪರಿಶೀಲಿಸಿದ ನ್ಯಾಯಾಲಯ, ನಾಯಿಗಳಿಗೆ ಕ್ರೂರವಾಗಿ ಥಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ಉಲ್ಲೇಖಿಸಿದೆ. ಇಂತಹ ಸಂದರ್ಭದಲ್ಲೂ ನಾಯಿಗಳ ಕಸ್ಟಡಿಯನ್ನು ಹಿಂಸೆ ನೀಡಿದ ವ್ಯಕ್ತಿಗೆ ಹಸ್ತಾಂತರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಾಣಿಗಳಿಗೂ ಹಿಂಸೆಯಿಂದ ಮುಕ್ತವಾಗಿ ಬದುಕುವ ಹಕ್ಕಿದೆ. ಅವು ಮನುಷ್ಯರಂತೆ ಮಾತನಾಡಲು ಸಾಧ್ಯವಾಗದಿದ್ದರೂ ನೋವು ಮತ್ತು ಸಂಕಟವನ್ನು ಅನುಭವಿಸುವ ಜೀವಿಗಳಾಗಿವೆ. ಕಾನೂನು ಸಹ ಪ್ರಾಣಿಗಳನ್ನು ಕೇವಲ ಮನುಷ್ಯರ ಉಪಯೋಗಕ್ಕಾಗಿ ಇರುವ ವಸ್ತುಗಳೆಂದು ಪರಿಗಣಿಸುವುದನ್ನು ಬಹಳ ಹಿಂದೆಯೇ ನಿಲ್ಲಿಸಿದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಾಣಿಗಳು ಸಹ ಘನತೆ, ಕರುಣೆ ಹಾಗೂ ರಕ್ಷಣೆಗೆ ಅರ್ಹವಾದ ಜೀವಿಗಳು. ಒಂದು ನಾಗರಿಕ ಸಮಾಜದ ಮೌಲ್ಯವನ್ನು ಅದು ತನ್ನ ಸಹಮಾನವರೊಂದಿಗೆ ಹೇಗೆ ವರ್ತಿಸುತ್ತದೆ ಎಂಬುದರ ಜೊತೆಗೆ ಮೂಕ ಜೀವಿಗಳೊಂದಿಗೆ ಎಷ್ಟು ಕರುಣೆ ಮತ್ತು ನ್ಯಾಯದಿಂದ ನಡೆದುಕೊಳ್ಳುತ್ತದೆ ಎಂಬುದರ ಆಧಾರದ ಮೇಲೂ ಅಳೆಯಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರತಿ ಪ್ರಾಣಿಯ ಮೇಲಿನ ಕ್ರೌರ್ಯವು ಕೇವಲ ಆ ಜೀವಿಯ ಮೇಲಿನ ದೌರ್ಜನ್ಯವಲ್ಲ, ಅದು ಸಮಾಜದ ಮಾನವೀಯತೆ ಮತ್ತು ಆತ್ಮಸಾಕ್ಷಿಯ ಮೇಲಿನ ಕಳಂಕವಾಗಿದೆ. ಪ್ರಾಣಿಗಳ ಜೀವವನ್ನು ರಕ್ಷಿಸುವುದು ದಾನವಲ್ಲ, ಅದು ಸಾಂವಿಧಾನಿಕ ನೈತಿಕತೆಯನ್ನು ಕಾಪಾಡುವ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಬೆಂಗಳೂರು ನಗರದ ನಾಗಸಂದ್ರ ನಿವಾಸಿ ಕೆ.ಇ. ರಮೇಶ್ ಅವರ ಬಳಿ ವಿವಿಧ ತಳಿಯ ಒಂಬತ್ತು ನಾಯಿಗಳಿದ್ದವು. ಅವರು ನಾಯಿಗಳ ಮೇಲೆ ಪದೇ ಪದೇ ವೈರ್ ಹಾಗೂ ಪೈಪ್‌ಗಳಿಂದ ಹಲ್ಲೆ ನಡೆಸುತ್ತಿರುವುದನ್ನು ನೆರೆಹೊರೆಯವರು ಗಮನಿಸಿ, ಅದರ ವಿಡಿಯೊಗಳನ್ನು ಪೇಟಾ ಸಂಸ್ಥೆಗೆ ನೀಡಿದ್ದರು.

ದೂರಿನ ಮೇರೆಗೆ ಪೇಟಾ ಸಂಸ್ಥೆ ನಾಯಿಗಳನ್ನು ರಕ್ಷಿಸಿ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಬಳಿಕ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 325 ಮತ್ತು 62 ಹಾಗೂ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 11(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರ ನಾಯಿಗಳ ಮಾಲೀಕ ರಮೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಾಯಿಗಳನ್ನು ಹಿಂತಿರುಗಿಸಲು ಅನುಮತಿ ನೀಡಿದ್ದರೂ, ಅದನ್ನು ಪ್ರಶ್ನಿಸಿ ಪೇಟಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಾಯಿಗಳನ್ನು ಮಾಲೀಕನಿಗೆ ಒಪ್ಪಿಸಲು ನಿರಾಕರಿಸಿ, ಅವುಗಳನ್ನು ಪೇಟಾ ಸಂಸ್ಥೆಯ ವಶದಲ್ಲೇ ಇರಿಸಲು ಆದೇಶಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!