ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮೂಲತಃ ಜಕ್ಕಲಿ ಗ್ರಾಮದವರೂ, ನರೇಗಲ್ಲದ ಗಣ್ಯ ವರ್ತಕರೂ ಆಗಿರುವ ಮುತ್ತಣ್ಣ ಪಲ್ಲೇದ ಅವರಿಗೆ ಕರ್ನಾಟಕ ಸೇವಾ ರತ್ನ ರಾಜ್ಯ ಮಟ್ಟದ ಪುರಸ್ಕಾರ ದೊರೆತಿದೆ.
ವೀರಶೈವ ಪಂಚಮಸಾಲಿ ಸಮಾಜದ ಹೋಬಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಸಮಾಜ ಕಾರ್ಯ ವೈಖರಿಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ಈ ಪ್ರಶಸ್ತಿಯನ್ನು ಕೊಡಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಈಚೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಜರುಗಿತು. ಅಧ್ಯಕ್ಷ ಎಸ್. ರಾಮಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ಎಸ್.ಜಿ ಅವರೊಂದಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ರಾಮಸ್ವಾಮಿ ಮುತ್ತಣ್ಣ ಪಲ್ಲೇದ, ನರೇಗಲ್ಲದಂತಹ ಗ್ರಾಮೀಣ ಭಾಗದಲ್ಲಿ ಭೀಮಾಂಬಿಕಾ ಟ್ರೇಡರ್ಸ್ ರೈತ ಸಂಪರ್ಕ ಕೇಂದ್ರವನ್ನು ತೆರೆದು ಆ ಮೂಲಕ ರೈತರ ಅಭಿವೃದ್ಧಿಗಾಗಿ ಮಾಡುತ್ತಿರುವ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.
ಕರ್ನಾಟಕ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಮುತ್ತಣ್ಣ ಪಲ್ಲೇದರವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಹಾಲಕೆರೆ ಶ್ರೀಮಠದ ಶ್ರೀ ಮುಪ್ಪಿನ ಬಸವಲಿಂಗಸ್ವಾಮೀಜಿ, ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನರೇಗಲ್ಲ ಹೋಬಳಿ ವೀರಶೈವ ಪಂಚಮಸಾಲಿ ಸಮಾಜದ ಪದಾಧಿಕಾರಿಗಳು, ಸದಸ್ಯರು, ಚನ್ನು ಪಾಟೀಲ ಫೌಂಡೇಷನ್‌ನ ಉಮೇಶ ಪಾಟೀಲ ಮತ್ತು ಸದಸ್ಯರು, ಬೀಚಿ ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಮತ್ತು ಸದಸ್ಯರು ಮುತ್ತಣ್ಣನವರಿಗೆ ಶುಭ ಹಾರೈಸಿದ್ದಾರೆ.



