ವಿಜಯಸಾಕ್ಷಿ ಸುದ್ದಿ, ಗದಗ : ಸರ್ವರಿಗೂ ಸರ್ವ ಆರೋಗ್ಯ ದೊರೆಯುವಂತಾಗಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಸದಾ ಕ್ರೀಡೆ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಆರೋಗ್ಯವಂತ ವ್ಯಕ್ತಿ ಅರಮನೆಯಲ್ಲಿರುವ ರಾಜಕುಮಾರನನ್ನೂ ನಾಚಿಸುವಂತಹ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಗರದ ಖ್ಯಾತ ಚರ್ಮರೋಗ ತಜ್ಞರು ಹಾಗೂ ಕ್ರೀಡಾಪಟುಗಳಾದ ಡಾ. ತುಕಾರಾಮ ಸೂರಿ ಅಭಿಪ್ರಾಯಪಟ್ಟರು.
ಭಾರತೀಯ ರೆಡ್ ಕ್ರಾಸ್ ಭವನದಲ್ಲಿ `ನನ್ನ ಆರೋಗ್ಯ-ನನ್ನ ಹಕ್ಕು’ ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಮಾಲತಿ ಇನಾಮತಿ ಮಾತನಾಡುತ್ತಾ, ಯಾವುದೇ ಒಬ್ಬ ವ್ಯಕ್ತಿ ದೈಹಿಕವಾಗಿ ಅಸಮರ್ಥರಾಗಿದ್ದರೂ ಮನೋಸಾಮರ್ಥ್ಯ ಅತ್ಯುತ್ತಮವಾಗಿದ್ದರೆ ಯಾವುದೇ ಸಾಧನೆಯನ್ನು ಸುಲಭವಾಗಿ ಸಾಧಿಸಬಹುದು ಎಂದರು.
ಸಂಸ್ಥೆಯ ಸದಸ್ಯರಾದ ಸಂಜಯ ಬಾಗಮಾರ ಹಾಗೂ ಇಂದಿರಾ ಬಾಗಮಾರ ದಂಪತಿಗಳು, ಡಾ. ಡಿಂಪಲ್ ಬಾಗಮಾರ ಅವರು ಸಂಸ್ಥೆಗೆ ಎಲೆಕ್ಟ್ರಾನಿಕ್ ಗಡಿಯಾರವನ್ನು ಕೊಡುಗೆಯಾಗಿ ನೀಡಿದರು. 10 ಜನ ಫಲಾನುಭವಿಗಳಿಗೆ ರೆಡ್ ಕ್ರಾಸ್ ವತಿಯಿಂದ ಹೈಜೆನಿಕ್ ಕಿಟ್ ವಿತರಿಸಲಾಯಿತು.
ವೇದಿಕೆಯ ಮೇಲೆ ಉಪಸಭಾಪತಿ ನಾರಾಯಣಪ್ಪ ಇಲ್ಲೂರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾದ ಡಾ. ಚಾರುಮತಿ ಗೊಡಬೋಲೆ, ದ್ರಾಕ್ಷಾಯಿಣಿ ಮೂರಶಿಳ್ಳಿನ, ದಿನೇಶ ಜೈನ್ ಹಾಜರಿದ್ದರು. ಸಂಸ್ಥೆಯ ಗೌರವ ಖಜಾಂಜಿ ಪ್ರೊ. ಕೆ.ಎಚ್. ಬೇಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಶ್ಚಿತಾ ಬಿ.ಎಲ್ ಪ್ರಾರ್ಥಿಸಿದರು. ದಾನೇಶ್ವರಿ ಕೊಕ್ಕಳಕಿ ಹಾಗೂ ರುದ್ರಪ್ಪ ಕರಡಿ ಪರಿಚಯಿಸಿದರು. ಪ್ರಕಾಶ ಗಾಣಿಗೇರ ನಿರೂಪಿಸಿದರು. ವಾಗ್ದೇವಿ ಕುಲಕರ್ಣಿ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ಮಾತನಾಡಿ, ಆರೋಗ್ಯವನ್ನು ಸಧೃಡವಾಗಿಟ್ಟುಕೊಂಡರೆ, ಎಂತಹ ಕಷ್ಟದ ಕೆಲಸವನ್ನು ಸರಾಗವಾಗಿ ನಿರ್ವಹಿಸಬಹುದು. ಇಂದಿನ ಯುವಕರು ನಿರಾಶಾಭಾವನೆಯಿಂದ ಹಿಂಜರಿಯದೇ ಸದಾ ಕ್ರಿಯಾಶೀಲರಾಗಿ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಸದೃಢ ನಾಗರಿಕರಾದರೆ ದೇಶ ಸದೃಢವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.