ಮೈಸೂರು: ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಸೊಸೆ ಆತ್ಮಹತ್ಯೆಗೆ ಕಾರಣರಾದ ಪ್ರಕರಣದಲ್ಲಿ ಅತ್ತೆಗೆ 7 ವರ್ಷ ಹಾಗೂ ಪತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರು ನ್ಯಾಯಾಲಯ ಆದೇಶ ನೀಡಿದೆ.
ಪತ್ನಿ ತೇಜಮಣಿ ಆತ್ಮಹತ್ಯೆಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಪತಿ ಎನ್. ನವೀನ್ ಕುಮಾರ್ ಹಾಗೂ ಅತ್ತೆ ರಾಣಿ ಅವರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಪ್ರಕರಣದ ವಿವರಗಳ ಪ್ರಕಾರ, 2018ರ ಆಗಸ್ಟ್ 7ರಂದು ತೇಜಮಣಿ ಅವರು ಅಧಿಕ ಪ್ರಮಾಣದಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆಗಾಗಿ ಪತಿ ಹಾಗೂ ಅತ್ತೆ ತೇಜಮಣಿಯನ್ನು ನಿರಂತರವಾಗಿ ಪೀಡಿಸುತ್ತಿದ್ದರು ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.
ತೇಜಮಣಿ ಅವರು ತವರು ಮನೆಯಲ್ಲಿದ್ದ ಸಂದರ್ಭದಲ್ಲಿ ಪತಿ ಹಾಗೂ ಅತ್ತೆ ಅಲ್ಲಿಗೆ ತೆರಳಿ, ವರದಕ್ಷಿಣೆ ನೀಡದಿದ್ದರೆ ಎರಡು ದಿನಗಳಲ್ಲಿ ಮಗನಿಗೆ ಬೇರೆ ಹುಡುಗಿ ನೋಡಿ ಮದುವೆ ಮಾಡುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಘಟನೆ ನಡೆದ ಅದೇ ದಿನ ತೇಜಮಣಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಪ್ರಕರಣದ ತನಿಖೆಯನ್ನು ಎನ್.ಆರ್ ವಿಭಾಗದ ಆಗಿನ ಎಸಿಪಿ ಸಿ. ಗೋಪಾಲ್ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಎನ್. ರೂಪಾ ಅವರು ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ, ಪತಿ ಎನ್. ನವೀನ್ ಕುಮಾರ್‌ಗೆ 10 ವರ್ಷ ಜೈಲು ಹಾಗೂ 1.50 ಲಕ್ಷ ರೂ. ದಂಡ, ಅತ್ತೆ ರಾಣಿಗೆ 7 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಿದ್ದಾರೆ.



