ಮೈಸೂರು: ಮೈಸೂರು ಅರಮನೆ ಬಳಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಲಕ್ಷ್ಮೀ ಅವರು ಕುಟುಂಬದವರೊಂದಿಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಲಕ್ಷ್ಮೀ ಅವರ ಪುತ್ರಿ ಡಿಂಪಲ್ ಬದುಕುಳಿದಿದ್ದು, ತಾಯಿ ಸಾವಿನ ಸುದ್ದಿ ತಿಳಿದು ಕಣ್ಣೀರಿಟ್ಟಿದ್ದಾರೆ.
ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದ ಸಮಯದಲ್ಲೇ ಈ ಘಟನೆ ನಡೆದಿದೆ. ಗುರುವಾರ ರಾತ್ರಿ ಸುಮಾರು 8.30ರ ವೇಳೆಗೆ ಉತ್ತರ ಪ್ರದೇಶ ಮೂಲದ ಸಲೀಂ ಎಂಬವರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದರು. ಬಲೂನ್‌ಗೆ ಗ್ಯಾಸ್ ತುಂಬಿಸುವ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು, ಸಲೀಂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸ್ಫೋಟದಲ್ಲಿ ನಾಲ್ಕೈದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಸ್ಫೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡವರಲ್ಲಿ ನಂಜನಗೂಡಿನ ಮಂಜುಳ ಅವರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮಂಜುಳ ಅವರು ಮೈಸೂರಿನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು, ವ್ಯಾಪಾರ ಮುಗಿಸಿಕೊಂಡು ಬಸ್ ಹತ್ತಲು ತೆರಳುತ್ತಿದ್ದ ವೇಳೆ ಈ ದುರಂತಕ್ಕೆ ಬಲಿಯಾಗಿದ್ದಾರೆ.
ಮೃತ ಸಲೀಂ ಅವರು ಕೇವಲ 15 ದಿನಗಳ ಹಿಂದಷ್ಟೇ ಮೈಸೂರಿಗೆ ಆಗಮಿಸಿ, ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ವಾಸವಾಗಿದ್ದರು. ಮೂವರು ಸ್ನೇಹಿತರೊಂದಿಗೆ ಬಲೂನ್ ಮಾರಾಟ ಮಾಡುತ್ತಿದ್ದರೂ, ಘಟನೆ ನಡೆದ ರಾತ್ರಿ ಸಲೀಂ ಒಬ್ಬರೇ ಮಾರಾಟ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕ್ರಿಸ್‌ಮಸ್ ಸಮಯದಲ್ಲೇ ಈ ಸ್ಫೋಟ ಸಂಭವಿಸಿದ್ದರಿಂದ ಎನ್‌ಐಎಗೂ ಮಾಹಿತಿ ನೀಡಲಾಗಿದೆ. ಸಲೀಂ ಜೊತೆಯಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



