ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಇದಕ್ಕಾಗಿ ಅರಮನೆ ಆಡಳಿತ ಮಂಡಳಿ ಭರದಿಂದ ಸಿದ್ದತೆ ಮಾಡಿಕೊಳ್ಳುತ್ತಿದೆ. ಇಡೀ ಅರಮನೆಯನ್ನ ಒಂದು ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದೆ. ಇದೀಗ ಮೈಸೂರು ದಸರಾ ಸಂದರ್ಭದಲ್ಲಿ ತುತ್ತೂರಿ ಬ್ಯಾನ್ ಮಾಡುವಂತೆ ಸೂಚಿಸಿ ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ತುತ್ತೂರಿ ಕಿರಿಕಿರಿ ಉಂಟುಮಾಡುವ ಹಿನ್ನೆಲೆ ಕರ್ನಾಟಕ ಪೊಲೀಸ್ ಕಾಯ್ದೆ 1963, ಕಲಂ 35, 36 ಮತ್ತು 92 (Q) ಅಡಿ ವುವುಜೆಲಾ (ತುತ್ತೂರಿ) ಮಾರಾಟ ಮಾಡುವುದು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963 ಸೆಕ್ಷನ್ 92 (Q) ಪ್ರಕಾರ ಹಾಗೂ ಭಾರತೀಯ ನ್ಯಾಯ ಸಂಹಿತೆ-2023 ಸೆಕ್ಷನ್ 270ರಲ್ಲಿ ಸಾರ್ವಜನಿಕ ಉಪದ್ರವವನ್ನು ಅಪರಾಧವೆಂದು ಪರಿಗಣಿಸಿದ್ದು,
ಸಾರ್ವಜನಿಕ ಆರೋಗ್ಯ, ಸುರಕ್ಷತೆ, ನೈತಿಕತೆಗೆ ಕಿರಿಕಿರಿ ಉಂಟುಮಾಡುತ್ತದೆ ಎಂದು ಪರಿಗಣಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ಘಟಕದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.