ಚಿಕ್ಕೋಡಿ:- ನಾ ಡ್ರೈವರ್, ನೀ ನನ್ನ ಲವ್ವರ್’ ಹಾಡಿನ ಗಾಯಕನಿಂದ ಹಲ್ಲೆ ಆರೋಪ ಕೇಳಿ ಬಂದಿದ್ದು, ಮಹಿಳೆ ದೂರು ದಾಖಲಿಸಿದ್ದಾರೆ.
ನೋಡಿಕೊಂಡು ಕಾರು ಚಲಾಯಿಸಿ ಎಂದಿದ್ದಕ್ಕೆ ಗಾಯಕ ಮಾಳು ನಿಪನಾಳ ಹಾಗೂ ಗ್ಯಾಂಗ್ ಸೇರಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಬಳಿ ನಡೆದಿದೆ.
ನಿಪನಾಳ ಗ್ರಾಮದ ಬಳಿ ಬೈಕ್ ಮೇಲೆ ತೆರಳುತ್ತಿದ್ದವರ ಮೇಲೆ ಹಲ್ಲೆ ಮಾಡಿದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿವೆ. ರ್ಯಾಶ್ ಡ್ರೈವಿಂಗ್ ಪ್ರಶ್ನಿಸಿದ್ದಕ್ಕೆ ಗಂಭೀರವಾಗಿ ಮಲ್ಲು ನಿಪನಾಳ ಗ್ಯಾಂಗ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಬಂದಿದೆ.
ಶೇಖರ ಹಕ್ಯಾಗೋಳ, ಅಶ್ವಿನಿ ಈರಿಗಾರ, ರೂಪಾ ಹಕ್ಯಾಗೋಳ ಎಂಬುವರ ಮೇಲೆ ಹಲ್ಲೆ ಮಾಡಿದ್ದು ಹಲ್ಲೆಯಿಂದ ಶೇಖರ ಹಕ್ಯಾಗೋಳ ತಲೆಗೆ ಗಂಭೀರ ಗಾಯವಾದರೆ ಮಹಿಳೆಯ ಕೈಗೆ ಗಂಭೀರ ಗಾಯವಾಗಿದೆ.
ಕುಡಿದ ಅಮಲಿನಲ್ಲಿ 10 ಜನ ಸೇರಿ ಮಹಿಳೆ ಎನ್ನುವದನ್ನ ಲೆಕ್ಕಿಸದೇ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ. ಗಾಯಾಳುಗಳು ಚಿಕ್ಕೋಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನೂರಿನಲ್ಲೇ ಮಾಳು ಈ ರೀತಿ ಗೂಂಡಾವರ್ತನೆ ತೋರಿದ್ದನ್ನು ಸ್ಥಳೀಯರು ನೋಡಿದ್ದಾರೆ. ಹಲ್ಲೆ ಮಾಡಿ ಅಲ್ಲಿಂದ ಮಾಳು ಪರಾರಿಯಾದರೆ ಸ್ಥಳೀಯರು ಗಾಯಾಳುಗಳಿಗೆ ಕೂಡಲೇ ರಾಯಬಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.