ಖ್ಯಾತ ನಟ ಕಮಲ್ ಹಾಸನ್ ಹೆಸರಿನಲ್ಲಿದ್ದ ಅತಿ ಕಿರಿಯ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಬಾಲನಟ ಎಂಬ ದಾಖಲೆಯನ್ನು ಇದೀಗ ಮರಾಠಿ ಬಾಲ ನಟಿ ತ್ರೀಶಾ ವಿವೇಕ್ ಥೋಸರ್ ಮುರಿದಿದ್ದಾಳೆ.
‘ನಾಳ್ 2’ ಸಿನಿಮಾದಲ್ಲಿನ ಅಭಿನಯಕ್ಕಾಗಿ ತ್ರೀಶಾ ಕೇವಲ ನಾಲ್ಕನೇ ವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಾಳೆ. ಈ ಮೂಲಕ 6ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕಮಲ್ ಹಾಸನ್ ಅವರ 60 ವರ್ಷದ ಹಳೆಯ ದಾಖಲೆಯನ್ನು ಆಕೆ ಹಿಂದಿಕ್ಕಿದ್ದಾಳೆ.
ಇದೀಗ ತ್ರೀಶಾಳ ಪ್ರಶಸ್ತಿ ಸ್ವೀಕಾರದ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪುಟ್ಟ ಬಾಲಕಿಯ ಆತ್ಮವಿಶ್ವಾಸಕ್ಕೆ ಫಿದಾ ಆಗಿದ್ದಾರೆ. ಸೀರೆ ಉಟ್ಟು ರಾಷ್ಟ್ರಪತಿಗಳ ಮುಂದೆ ಅತ್ಯಂತ ಧೈರ್ಯವಾಗಿ ನಡೆದು ಹೋಗಿ ಪ್ರಶಸ್ತಿ ಸ್ವೀಕರಿಸಿದ ದೃಶ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ತ್ರೀಶಾಳ ಸಾಧನೆಯನ್ನು ಕಮಲ್ ಹಾಸನ್ ಕೂಡ ವಿಶೇಷವಾಗಿ ಅಭಿನಂದಿಸಿದ್ದರು. ‘ನೀನು ನನ್ನ ದಾಖಲೆಯನ್ನು ಮುರಿದಿದ್ದೀಯ, ನಿನ್ನ ಪ್ರತಿಭೆ ಇನ್ನೂ ಎತ್ತರಕ್ಕೆ ಏರಲಿ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ್ದ ತ್ರೀಶಾ, ‘ರಾಷ್ಟ್ರಪತಿಗಳು ಅಭಿನಂದಿಸಿದ್ದು ನನಗೆ ತುಂಬಾ ಖುಷಿಯಾಯಿತು’ ಎಂದು ಹೇಳಿದ್ದಳು.



