ಜಿಲ್ಲೆಯಲ್ಲಿ ನ.3ರಿಂದ ಡಿ. 2ರವರೆಗೆ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನವನ್ನು ಜಿಲ್ಲೆಯಾದ್ಯಂತ ನವೆಂಬರ್ 3ರಿಂದ ಡಿಸೆಂಬರ್ 2ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಶುಕ್ರವಾರ ಜರುಗಿದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ರೈತರು, ಪಶುಪಾಲನೆ ಮಾಡುವವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೊಂದಿಗೆ ಸಹಕರಿಸಿ ತಮ್ಮಲ್ಲಿರುವ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, ಜಾಗೃತಿ ಮೂಡಿಸಲು ತಿಳಿಸಿದರು.

Advertisement

ಕೇಂದ್ರ ಪುರಸ್ಕೃತ ಯೋಜನೆ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ನೀಡಿ, 2030ರ ಒಳಗಾಗಿ ರೋಗ ನಿರ್ಮೂಲನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ ಜಾನುವಾರುಗಳ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ, ಜಾನುವಾರು ಉತ್ಪನ್ನಗಳ ರಫ್ತಿಗೆ ಅವಕಾಶ ಸಿಗುತ್ತದೆ. ಈ

ಮೂಲಕ ರೈತರ ಆದಾಯ ಹೆಚ್ಚಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ವಿವರಿಸಿದರು.
ನವೆಂಬರ್ 3ರಿಂದ ಡಿಸೆಂಬರ್ 2, 2025ರವರೆಗೆ 8ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸುಮಾರು 1,34,986 ದನ ಮತ್ತು 45,247 ಎಮ್ಮೆಗಳಿಗೆ ರೈತರ ಮನೆ ಬಾಗಿಲಲ್ಲೇ ಉಚಿತವಾಗಿ ಲಸಿಕೆಯನ್ನು ಅಭಿಯಾನದಲ್ಲಿ ಹಾಕುವುದಾಗಿ ಅವರು ತಿಳಿಸಿದರು.

ಅಭಿಯಾನ ಕಾರ್ಯಕ್ರಮಕ್ಕೆ ಬೇಕಾಗಿರುವ 1.9 ಲಕ್ಷ ಡೋಸ್ ಲಸಿಕೆ ಸರಬರಾಜಾಗಿದ್ದು, ಸಿರಿಂಜ್, ಪ್ರಚಾರ ಸಾಮಗ್ರಿ, ತುರ್ತು ಔಷಧ ಇತ್ಯಾದಿಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆಯ ನವಲಗುಂದ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಮೋಹನ ದ್ಯಾಬೇರಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಮಾತನಾಡಿ, ಅಭಿಯಾನದ ಯಶಸ್ವಿಗಾಗಿ ಎಲ್ಲ ಗ್ರಾಮ, ಪಟ್ಟಣಗಳನ್ನು ಸುಮಾರು 100 ಜಾನುವಾರುಗಳನ್ನು ಹೊಂದಿರುವ 1,779 ಬ್ಲಾಕ್‌ಗಳನ್ನಾಗಿ ವಿಂಗಡಿಸಿ, ಮೈಕ್ರೋಪ್ಲಾನ್ ಸಿದ್ಧಪಡಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿರುವ ಜಾನುವಾರು ಮಾಲೀಕರ ಮಾಹಿತಿ ಸಂಗ್ರಹಿಸಲಾಗಿದೆ ಹಾಗೂ ಲಸಿಕೆದಾರರ 110 ತಂಡಗಳನ್ನು ರಚಿಸಲಾಗಿದೆ. ಇಬ್ಬರು ಲಸಿಕೆದಾರರ ಒಂದು ತಂಡ ಪ್ರತಿ ದಿನ ಒಂದು ಬ್ಲಾಕ್‌ಗೆ ಭೇಟಿ ನೀಡಿ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು ಎಂದು ಸಭೆಯಲ್ಲಿ ವಿವರಿಸಿದರು.


Spread the love

LEAVE A REPLY

Please enter your comment!
Please enter your name here