ವಿಜಯಸಾಕ್ಷಿ ಸುದ್ದಿ, ಗದಗ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ‘ರಸ್ತೆ ಸಾರಿಗೆ ಸುರಕ್ಷತೆ ಪದ್ಧತಿಯ ಅನುಷ್ಠಾನ’ಗೊಳಿಸಿದ್ದಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ( ಎಎಸ್‌ಆರ್‌ಟಿಯು) ರಾಷ್ಟ್ರ ಮಟ್ಟದ ಪ್ರಶಸ್ತಿ ದೊರೆತಿದೆ. ಸದರಿ ಒಕ್ಕೂಟದ ಎಎಸ್‌ಆರ್‌ಟಿಯ ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಒಕ್ಕೂಟವು 13ನೇ ಆಗಸ್ಟ್ 1965ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಭಾರತ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನಿರ್ದೇಶನದ ಅನುಸಾರ ಕಾರ್ಯ ನಿರ್ವಹಿಸುತ್ತದೆ.
2022-23ನೇ ಸಾಲಿನಲ್ಲಿ ಬೆಸ್ಟ್ ರೋಡ್ ಸೇಫ್ಟಿ ಪ್ರಾಕ್ಟೀಸಸ್ ವಿಭಾಗದಡಿಯಲ್ಲಿ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಿದ್ದು, ಇದೇ ಮಾರ್ಚ್ 15ರಂದು ದೆಹಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ 64ನೇ ವಾರ್ಷಿಕ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಸಂಸ್ಥೆಯ ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಂಯೋಜಿತ ಯೋಜನೆ ಮತ್ತು ಪರಿಶ್ರಮದಿಂದ ಈ ಪ್ರಶಸ್ತಿ ಲಭಿಸಿದ್ದು, ಸಂಸ್ಥೆಯ ಎಲ್ಲ ವರ್ಗದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್, ಭಾ.ಆ.ಸೇ. ಅಭಿನಂದನೆ ಸಲ್ಲಿಸಿದ್ದಾರೆ.