ವಿಜಯಸಾಕ್ಷಿ ಸುದ್ದಿ, ಗದಗ: ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಬಾಕಿ ಉಳಿದಿರುವ ಪ್ರಕರಣಗಳಿಗೆ ತ್ವರಿತ ಹಾಗೂ ಸೌಹಾರ್ದಯುತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಜ್ಯಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಕರೆ ನೀಡಿದರು.
ನಗರದ ಜಿಲ್ಲಾ ಸತ್ರ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ನ್ಯಾಯಾಲಯದ ಹೊರಗಿನ (ಪ್ರೀ-ಲಿಟಿಗೇಷನ್) ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಅಪರೂಪದ ಅವಕಾಶವಾಗಿದೆ ಎಂದು ತಿಳಿಸಿದರು.
ಗದಗ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪ್ರಸ್ತುತ 21,101 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ರಾಜಿಗೆ ಅರ್ಹವಾಗಿರುವ 2,835 ಪ್ರಕರಣಗಳನ್ನು ಈಗಾಗಲೇ ಗುರುತಿಸಲಾಗಿದೆ. ರಾಜೀ ಸಂಧಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಜಿಲ್ಲೆಯಾದ್ಯಂತ ಒಟ್ಟು 15 ಬೆಂಚ್‌ಗಳನ್ನು ರಚಿಸಲಾಗಿದೆ.
ಜಮೀನು ಮತ್ತು ಆಸ್ತಿ ವಿವಾದಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ದಾವೆಗಳು, ಕೌಟುಂಬಿಕ ಕಲಹಗಳು, ಕಾರ್ಮಿಕ ಪ್ರಕರಣಗಳು ಹಾಗೂ ರಾಜಿಗೆ ಅರ್ಹವಾಗಿರುವ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವು ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಅಲ್ಲದೇ, ಪ್ರಕರಣ ರಾಜಿಯಾದ ಬಳಿಕ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸಂಬಂಧಗಳೂ ಉಳಿಯಲಿವೆ ಎಂದು ಹೇಳಿದರು.
ಕಳೆದ ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 3,383 ಚಾಲ್ತಿ ಪ್ರಕರಣಗಳು ಹಾಗೂ 62,299 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 65,682 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದವು. ಅಲ್ಲದೆ, ಮೂರು ಕೌಟುಂಬಿಕ ಪ್ರಕರಣಗಳಲ್ಲಿ ಬೇರೆಯಾಗಿದ್ದ ಕುಟುಂಬಗಳನ್ನು ಪುನಃ ಒಂದುಗೂಡಿಸುವಲ್ಲಿ ಯಶಸ್ಸು ಸಾಧಿಸಲಾಗಿತ್ತು.
ಈ ಬಾರಿ ಜಮೀನು ಹಾಗೂ ಆಸ್ತಿ ಹಂಚಿಕೆ ಪ್ರಕರಣಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಾಜಿಗೆ ಅರ್ಹವಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಸುಮಾರು 100 ಗ್ರಾಮಗಳನ್ನು “ವ್ಯಾಜ್ಯಮುಕ್ತ ಗ್ರಾಮ”ಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ಚಲನ್‌ಗಳ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಲಾಗಿದ್ದು, ಈ ಸೌಲಭ್ಯ ಜೂನ್ 21ರಿಂದ ಜುಲೈ 10ರವರೆಗೆ ಲಭ್ಯವಿರಲಿದೆ ಎಂದು ತಿಳಿಸಲಾಯಿತು.
ಅಲ್ಲದೇ, ಜುಲೈ 18ರಂದು ಚೆಕ್ ಬೌನ್ಸ್ (ಎನ್‌ಐ ಆಕ್ಟ್) ಪ್ರಕರಣಗಳಿಗಾಗಿಯೇ ವಿಶೇಷ ಲೋಕ ಅದಾಲತ್ ನಡೆಯಲಿದ್ದು, ಆಗಸ್ಟ್ 21, 22 ಹಾಗೂ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ‘ಸಮಾಧಾನ ಸಮಾರೋಪ’ ಹೆಸರಿನ ವಿಶೇಷ ಅದಾಲತ್ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯಿಂದ ಗುರುತಿಸಲಾದ 21 ಪ್ರಕರಣಗಳ ಪಕ್ಷಗಾರರು ದೆಹಲಿಗೆ ತೆರಳದೇ, ಇಲ್ಲಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಉಪಸ್ಥಿತರಿದ್ದರು.
“ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಿ, ಹಣ ಮತ್ತು ಸಮಯವನ್ನು ಉಳಿಸಿಕೊಳ್ಳಲು ಲೋಕ ಅದಾಲತ್ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ. ಇಲ್ಲಿ ಗೆದ್ದವರು ಅಥವಾ ಸೋತವರು ಇರುವುದಿಲ್ಲ, ಇಬ್ಬರೂ ಗೆದ್ದಂತೆಯೇ. ಸಾರ್ವಜನಿಕರು ಜುಲೈ 11ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡೆದು ತಮ್ಮ ವ್ಯಾಜ್ಯಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.”
ಶ್ರೀಮತಿ ನಾಗವೇಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ



