ಬೆಂಗಳೂರು: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ ಎನ್ಡಿಎ 202 ಸ್ಥಾನಗಳನ್ನು ಗಳಿಸಿದ್ದರೆ ಮಹಾಘಟಬಂಧನ್ 35 ಸ್ಥಾನಗಳನ್ನು ಗಳಿಸಿದೆ. ಇತರೆ 6 ಸ್ಥಾನಗಳನ್ನು ಪಡೆದಿದೆ. ಬಿಜೆಪಿ ಬಿಹಾರದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಬಿಹಾರದಲ್ಲಿ ಎನ್ಡಿಎಗೆ ಅದ್ಭುತ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಗೆ ಬಿಹಾರದ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಅವರ ಸರ್ಕಾರ ಗೆದ್ದಾಗ ಗೆಲುವು ಅಂತಾರೆ, ಸೋತರೆ ವೋಟ್ ಚೋರಿ ಅಂತಾರೆ. ತೆಲಂಗಾಣದಲ್ಲಿ ನಿಮ್ಮ ಪಕ್ಷ ಹೇಗೆ ಗೆಲ್ತು? ಸಿದ್ದರಾಮಯ್ಯ ಅವರೇ 135 ಸೀಟ್ಗಳನ್ನ ಹೇಗೆ ಪಡೆದ್ರಿ? ವೋಟ್ ಚೋರಿ ಅಂದ್ರೆ ನಿಮ್ಮ ಪಕ್ಷ ಮಾಡೋದು ಏನು? ರಾಹುಲ್ ಗಾಂಧಿ & ಟೀಂ ಹಿಟ್ ಅಂಡ್ ರನ್ ಟೀಂ. ಬರೀ ಹಿಟ್ & ರನ್ ಮಾಡೋದಷ್ಟೇ ಅವರ ಕೆಲಸ ಎಂದು ಹರಿಹಾಯ್ದರು.
ಇನ್ನು ಬೆಂಗಳೂರು ಟನಲ್ ರಸ್ತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಟನಲ್ ರಸ್ತೆ ಯೋಜನೆಗೆ ಆತುರ ಬೇಡ. ಸರಿಯಾದ ಡಿಪಿಆರ್ ಮಾಡಿ. ಪರಿಸರ ಪರಿಣಾಮ ವರದಿ ಆಗಿಲ್ಲ. ತರಾತುರಿಯಲ್ಲಿ ಯೋಜನೆ ಬೇಡ. ಹೊಸ ಡಿಪಿಆರ್ ಮಾಡಿ, ಪರಿಸರ ಉಳಿಸಿ. ಅಭಿವೃದ್ಧಿಗೆ ನಾವು ವಿರೋಧ ಇಲ್ಲ, ಆದರೆ ಪಾರ್ಕ್, ಸಾರ್ವಜನಿಕ ಸ್ಥಳಗಳನ್ನು ಉಳಿಸಿ ಎಂದರು.



