ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗಜೇಂದ್ರಗಡ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಶಿವಕುಮಾರ ಶಶಿಮಠ ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗೀತಾ ಶಶಿಧರ ವಾಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಮೈಸೂರುಮಠದಲ್ಲಿ ಸೋಮವಾರ ಜರುಗಿದ ಮಹಾಸಭೆಯ ತಾಲೂಕು ಘಟಕದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಯುವ ಘಟಕದ ಅಧ್ಯಕ್ಷ ಶಿವಕುಮಾರ ಶಶಿಮಠ ಮಾತನಾಡಿ, ತಾಲೂಕಿನಲ್ಲಿ ಯುವಕರನ್ನು ಸಂಘಟಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಹಿರಿಯರ ಮಾರ್ಗದರ್ಶನದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿ ಸಮಾಜದ ಸಂಘಟನಾತ್ಮಕ ಬಲ ಹೆಚ್ಚಿಸಲಾಗುವುದು ಎಂದು ಹೇಳಿದರು.
ನೂತನ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ವಾಲಿ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಜಾಲಿಹಾಳ, ತಾಲೂಕು ಘಟಕದ ಅಧ್ಯಕ್ಷ ಪ್ರಭು ಚವಡಿ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಶೀಲವಂತರ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ಡಾ. ಬಿ.ವಿ. ಕಂಬಳ್ಯಾಳ, ಟಿ.ಎಸ್. ರಾಜೂರ, ಬಿ.ಎಂ. ಸಜ್ಜನರ, ಗುರುಸಿದ್ದಯ್ಯ ಸೂಗಿರಯ್ಯನಮಠ, ಯುವ ಘಟಕದ ನಿರ್ದೇಶಕ ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಸಮಾಜದ ಅನೇಕ ಮುಖಂಡರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಅಧ್ಯಕ್ಷ ಶಿವಕುಮಾರ ಶಶಿಮಠ ಅವರನ್ನು ಮಹಾಸಭೆಯ ವತಿಯಿಂದ ಸನ್ಮಾನಿಸಲಾಯಿತು.



