ಬೆಂಗಳೂರು: ರಾಜ್ಯದ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಇನ್ಮುಂದೆ ರಾಜ್ಯದ ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ವೈದ್ಯರು ಪ್ರತಿದಿನ ರಾತ್ರಿ 9 ಗಂಟೆಯ ಬಳಿಕ ‘ಕರ್ತವ್ಯ’ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಲಿದೆ. ಈ ಹೊಸ ನಿಯಮ ನವೆಂಬರ್ 1ರಿಂದ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಕ್ಟೋಬರ್ 17ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ವೈದ್ಯರ ರಾತ್ರಿ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಆ್ಯಪ್ನಲ್ಲಿ ಪ್ರತ್ಯೇಕ ಮಾಡ್ಯೂಲ್ ಸಿದ್ಧಪಡಿಸಲಾಗಿದ್ದು, ಜಿಯೋ-ಫೆನ್ಸಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರಿಂದ ವೈದ್ಯರು ತಾವು ಕರ್ತವ್ಯ ನಿರ್ವಹಿಸುವ ನಿಗದಿತ ಸ್ಥಳದಲ್ಲಿಯೇ ಇದ್ದು ಹಾಜರಾತಿ ದಾಖಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗಲಿದೆ.
ಆದೇಶದ ಪ್ರಕಾರ, ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ನಿಯೋಜನೆಗೊಂಡಿರುವ ವೈದ್ಯರು ಪೂರ್ವಾನುಮತಿಯಿಲ್ಲದೆ ತಮ್ಮ ಕರ್ತವ್ಯದ ಕೇಂದ್ರದಿಂದ ಹೊರಹೋಗುವಂತಿಲ್ಲ. ಅನುಮತಿಯಿಲ್ಲದೆ ಕರ್ತವ್ಯದ ಸ್ಥಳದಲ್ಲಿ ಲಭ್ಯವಿಲ್ಲದ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.
ಆದರೆ ಅಧಿಕೃತ ರಜೆಯಲ್ಲಿರುವ ವೈದ್ಯರು, ಸರ್ಕಾರಿ ಕರ್ತವ್ಯದ ನಿಮಿತ್ತ ಹೊರಗಿರುವವರು ಅಥವಾ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದವರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಸಂದರ್ಭಗಳ ವಿವರಗಳನ್ನೂ ಆ್ಯಪ್ನಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ.
ಇನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರತಿ ತಿಂಗಳು ವೈದ್ಯರ ಹಾಜರಾತಿ ವರದಿಯನ್ನು ಪರಿಶೀಲಿಸಲಿದ್ದಾರೆ. ಪ್ರಾಯೋಗಿಕ ಯೋಜನೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಇತರ ನೌಕರರಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕ್ರಮದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ ಮತ್ತು ಸಾರ್ವಜನಿಕ ಆರೋಗ್ಯ ಸೇವೆಯ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.



