ನವದೆಹಲಿ: ಪ್ಯಾನ್ ಕಾರ್ಡ್ಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದರಿಂದ ಪ್ಯಾನ್ ಪಡೆಯುವ ಪ್ರಕ್ರಿಯೆ ಮತ್ತಷ್ಟು ಕಠಿಣವಾಗಲಿದೆ.
ಈವರೆಗೆ ಪ್ಯಾನ್ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಮಾತ್ರ ಸಾಕಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಆಧಾರ್ ಜೊತೆಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ. ವಿಶೇಷವಾಗಿ ಜನ್ಮ ದಿನಾಂಕದ ದೃಢೀಕರಣಕ್ಕೆ ಆಧಾರ್ ಸಾಕಾಗುವುದಿಲ್ಲ ಎಂದು ತಿಳಿಸಲಾಗಿದೆ.
ಹೊಸ ನಿಯಮಗಳಂತೆ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಚಾಲನಾ ಪರವಾನಗಿ ಅಥವಾ ಎಸ್ಎಸ್ಎಲ್ಸಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಅಫಿಡವಿಟ್ ಸೇರಿದಂತೆ ಇತರೆ ಸರ್ಕಾರಿ ದಾಖಲೆಗಳನ್ನೂ ಕೇಳಬಹುದಾಗಿದೆ.
ಇನ್ನೊಂದು ಪ್ರಮುಖ ಬದಲಾವಣೆ ಹೆಸರಿನ ಹೊಂದಿಕೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್ನಲ್ಲಿರುವ ಹೆಸರು ಮತ್ತು ಪ್ಯಾನ್ ಕಾರ್ಡ್ನಲ್ಲಿರುವ ಹೆಸರು ನಿಖರವಾಗಿ ಒಂದೇ ರೀತಿಯಲ್ಲಿ ಇರಬೇಕು. ಇನಿಷಿಯಲ್ಗಳು ಸೇರಿದಂತೆ ಯಾವುದೇ ವ್ಯತ್ಯಾಸ ಇದ್ದರೆ ಪ್ಯಾನ್ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.
ಹೀಗಾಗಿ, ಪ್ಯಾನ್ಗೆ ಅರ್ಜಿ ಸಲ್ಲಿಸುವವರು ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯ ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.



