ವಿಜಯಸಾಕ್ಷಿ ಸುದ್ದಿ, ಡಂಬಳ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮರಿಯಪ್ಪ ಬ.ಬಚೇನಹಳ್ಳಿ ಹೇಳಿದರು.
ಡಂಬಳ ಹೋಬಳಿಯ ಡ.ಸ. ರಾಮೆನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳೇ ಬುದ್ಧಿವಂತರಾಗಿರುತ್ತಾರೆ ಎನ್ನುವುದು ಶುದ್ಧ ಸುಳ್ಳು. ಸರಕಾರಿ ಶಾಲೆಯ ಮಕ್ಕಳು ಕೂಡ ಬುದ್ಧಿವಂತರಿರುತ್ತಾರೆ. ಸರಕಾರಿ ಶಾಲೆಯಲ್ಲಿ ಕಲಿತು ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಶಾಲೆಯ ಮುಖ್ಯಶಿಕ್ಷಕ ಎಸ್.ವಾಯ್. ಕನ್ನೇರ ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲಿ. ಆ ಮೊಳಕೆ ಬೆಳೆದು ದೊಡ್ಡ ಮರವಾಗಬೇಕು. ಅದಕ್ಕೆ ಪೋಷಣೆಯ ಅವಶ್ಯಕತೆ ಇದೆ. ಹಾಗೆಯೇ ಮಕ್ಕಳ ಬದುಕು ಉತ್ತಮಗೊಳ್ಳಲು ಗುರುವೃಂದ ಮತ್ತು ಎಸ್‌ಡಿಎಂಸಿ ಕಾರ್ಯ ಗುರುತರವಾದದ್ದು ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಮರಿಯಪ್ಪ ಬ.ಬಚೇನಹಳ್ಳಿ, ಉಪಾಧ್ಯಕ್ಷೆಯಾಗಿ ಸುಶೀಲಾ ಸಂದಿಗೋಡ, ಸದಸ್ಯರಾಗಿ ಶರಣಪ್ಪ ಆನಿ, ರಾಜಪ್ಪ ಸಾಸ್ವಿಹಳ್ಳಿ, ಯಂಕಪ್ಪ ಕೂಲಿ, ಸಿದ್ದಪ್ಪ ಮಂಡಲಗೇರಿ, ಮಂಜುನಾಥ ಅಸೂಟಿ, ಸೋಮಪ್ಪ ಸಂದಿಗೋಡ, ಮಹಾಂತೇಶ ಹರಿಜನ, ಮೈಲಪ್ಪ ಪೂಜಾರಿ, ಕಸ್ತೂರವ ವಗ್ಗರಣೆ, ಸವಿತಾ ಸುಗ್ನಳ್ಳಿ, ದೇವಕ್ಕ ಕೂಲಿ, ಲಲಿತ ಕೂಲಿ, ಯಲ್ಲವ್ವ ಹೊರಪೇಟೆ, ಪೂರ್ಣಿಮಾ ಪೂಜಾರ, ಫಕೀರವ ಹರಿಜನ, ರಮಜಾನಬೀ ನದಾಫ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುವೃಂದದ ಎಚ್.ಜಿ. ವಡ್ಡರ, ಸಾವಿತ್ರಿ ವಡ್ಡಟ್ಟಿ, ಗ್ರಾಮದ ಹಿರಿಯರು, ವಿದ್ಯಾರ್ಥಿಗಳು ಇದ್ದರು. ಕೆ.ಆರ್. ಯತ್ನಟ್ಟಿ ನಿರೂಪಿಸಿದರು. ಈರಮ್ಮ ಸ್ಥಾವರಮಠ ವಂದಿಸಿದರು.



