ಪಿರಮಿಡ್ ಧ್ಯಾನದಿಂದ ಹೊಸ ಚೈತನ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಿತ್ಯದ ಒತ್ತಡದ ಬದುಕಿನಲ್ಲಿ ಪಿರಮಿಡ್ ಧ್ಯಾನ ಮತ್ತು ಸತ್ಸಂಗ ಅಳವಡಿಸಿಕೊಂಡರೆ ಮನಸ್ಸಿನ ಶುದ್ಧೀಕರಣದೊಂದಿಗೆ ದೇಹಕ್ಕೆ ಶಕ್ತಿ, ಹೊಸ ಚೈತನ್ಯ ಲಭಿಸುತ್ತದೆ ಎಂದು ಪಿರಮಿಡ್ ಯೋಗ ಸಾಧಕರಾದ ಬೆಂಗಳೂರಿನ ಸುರೇಶ ಕಲಬುರ್ಗಿ ಹೇಳಿದರು.

Advertisement

ಅವರು ಪಟ್ಟಣದ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಗದುಗಿನ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ, ಲಕ್ಷ್ಮೇಶ್ವರ ಧ್ಯಾನ ಪರಿವಾರದ ಸಹಯೋಗದಲ್ಲಿ ನಡೆದ ಧ್ಯಾನ ಪರಿಚಯ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿರಮಿಡ್ ಧ್ಯಾನದಿಂದ ಮನಸ್ಸಿನಲ್ಲಿನ ದ್ವೇಷ, ಕೋಪ, ಚಂಚಲತೆ, ನಕಾರಾತ್ಮಕ ಚಿಂತನೆಗಳು ತೊಲಗಿ ಶಾಂತ, ಶುದ್ಧ, ಸದ್ಭಾವನೆ ಪ್ರಾಪ್ತವಾಗುತ್ತದೆ. ಉಸಿರಾಟದೊಂದಿಗಿನ ಈ ಪಿರಮಿಡ್ ಧ್ಯಾನವು ದೇಹದೊಳಗಿನ ವಿಶ್ವಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಒಟ್ಟಿನಲ್ಲಿ ಪಿರಮಿಡ್ ಧ್ಯಾನವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಉತ್ತೇಜಿಸುವ ಒಂದು ಸಮಗ್ರ ಅಭ್ಯಾಸವಾಗಿದೆ. ಮಕ್ಕಳಿಂದ ಹಿರಿಯರವರೆಗೂ ದಿನದ ಯಾವುದೇ ಬಿಡುವಿನ ವೇಳೆಯಲ್ಲಿ ಈ ಧ್ಯಾನವನ್ನು ಅಳವಡಿಸಿಕೊಳ್ಳಬಹುದು ಎಂದರು.

ಹುಬ್ಬಳ್ಳಿಯ ಪಿರಮಿಡ್ ಮಾಸ್ಟರ್ ಪೂರ್ಣಿಮಾ ಆನೆಪ್ಪನವರ, ವಿದ್ಯಾರಾಣಿ ಕೂಬಳ್ಳಿ ಅವರು ಪಿರಮಿಡ್ ಧ್ಯಾನದ ಉಪಯುಕ್ತತೆ ಕುರಿತು ತಿಳಿಸಿದರು. ಪ್ರಾಸ್ತಾವಿಕ ಮಾತನಾಡಿದ ಧ್ಯಾನ ಪರಿವಾರದ ಸುಭಾಸ ಓದುನವರ, ಲಕ್ಷ್ಮೇಶ್ವರದಲ್ಲಿ ಪಿರಾಮಿಡ್ ಧ್ಯಾನ ಕೇಂದ್ರ ನಿರ್ಮಾಣವಾಗಲಿದ್ದು, ಸಾರ್ವಜನಿಕರು ಆರೋಗ್ಯಕರ, ಸಾತ್ವಿಕ ಜೀವನಕ್ಕಾಗಿ ಪಿರಮಿಡ್ ಧ್ಯಾನ ಮಾಡಬೇಕು ಎಂದರು.

ಮಂಗಳಾದೇವಿ ಜಿ.ಮಹಾಂತಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ, ಈರಣ್ಣ ಅಂಕಲಕೋಟಿ, ರವಿ ರಾಜನಾಳ, ಎಂ.ಕೆ. ಕಳ್ಳಿಮಠ ಮುಂತಾದವರಿದ್ದರು. ವಾಣಿ ಓದುನವರ, ಪಾರ್ವತಿ ಕಳ್ಳಿಮಠ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here