ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ಅತ್ತೆ ಹಾಗೂ ಮಾವನ ಕಿರುಕುಳವನ್ನು ತಾಳಲಾರದೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
22 ವರ್ಷದ ಸಿರೀಶಾ ಮೃತ ನವವಿವಾಹಿತೆ. ಮೃತ ಸಿರೀಶಾ ಕಳೆದ ಐದು ವರ್ಷಗಳಿಂದ ಅದೇ ಗ್ರಾಮದ ಶ್ರೀನಾಥ್ ಎಂಬ ಯುವಕನೊಂದಿಗೆ ಪ್ರೀತಿಸುತ್ತಿದ್ದಳು. ಪ್ರೀತಿಗೆ ವಿರೋಧದ ನಡುವೆಯೇ ಇಬ್ಬರೂ ಕಳೆದ ವರ್ಷ ದೇವಾಲಯದಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯ ನಂತರ ಯುವತಿಗೆ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ.
ಶ್ರೀನಾಥ್ ಕುಟುಂಬವು ಆತನ ಮಾವನ ಮಗಳೊಂದಿಗೆ ಮದುವೆ ಮಾಡಬೇಕೆಂದು ಬಯಸಿದ್ದರೆನ್ನಲಾಗಿದ್ದು, ಈ ಸಂಬಂಧ ಯುವತಿಯ ಮೇಲೆ ಮನಸ್ಥಾಪ ಉಂಟಾಗಿತ್ತು. ಕಿರುಕುಳದ ವಿರುದ್ಧ ಸಿರೀಶಾ ಕುಟುಂಬವು ಮೊದಲು ಸ್ಥಳೀಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವಿದೆ.
ಸಿರೀಶಾ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಬಳಿಕ ಯುವತಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾ, ಮೃತದೇಹವನ್ನು ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಲು ಯತ್ನಿಸಿದರು. ಆದರೆ ಪೊಲೀಸರು ಅವರಿಗೆ ಅವಕಾಶ ನೀಡದೇ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟಿದ್ದಾರೆ.
ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಯುವತಿಯ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದೆ.



